ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರೆದುರು ತಂದು ನಿಲ್ಲಿಸುವ ನಿರ್ದೇಶಕರ ಸಾಲಿನಲ್ಲಿ ಹೇಮಂತ್ ಎಂ.ರಾವ್ ಕೂಡ ಪ್ರಮುಖರು. ಮನು, ಸುರಭಿ ಹಾಗೂ ಪ್ರಿಯಾಳ ಪ್ರೇಮಕಥೆ ಹೇಳಿ ಗೆದ್ದಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ಇದೀಗ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ಈಗಾಗಲೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ನಂತರ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಹೇಮಂತ್ ರಾವ್ ಹೊಸ ಅಲೆ ಎಬ್ಬಿಸಿದವರು. ಇತ್ತ ಕನ್ನಡ ಚಿತ್ರರಂಗದ ನಿರ್ಮಾಪಕರ ಅಚ್ಚುಮೆಚ್ಚಿನ ನಟರೆಂದೇ ಕರೆಯಿಸಿಕೊಂಡಿರುವ ಶಿವಣ್ಣರೊಂದಿಗೆ ಹೊಸ ಸಿನಿಮಾ ಮಾಡಲು ಕೈ ಜೋಡಿಸಿರುವುದು ಎಲ್ಲೆಡೆ ಭಾರೀ ಸುದ್ದಿಯಾಗಿದೆ. ಕೆಲ ದಿನಗಳಿಂದ ಹೇಮಂತ್ ರಾವ್ ಅವರು ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ವಿಚಾರ ಹರಿದಾಡುತ್ತಿತ್ತು. ಈ ಬಗ್ಗೆ ಇದೀಗ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. ಆದರೆ ಶೀರ್ಷಿಕೆ ಅನೌನ್ಸ್ ಮಾಡಿಲ್ಲ.
ವೃತ್ತಿಯಲ್ಲಿ ವೈದ್ಯರಾಗಿರುವ ವೈಶಾಕ್ ಗೌಡ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ತಮ್ಮದೇ ವೈಶಾಕ್ ಜೆ.ಫಿಲಂಸ್‌ನಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಸಿನಿಮಾಗಳ ಪೈಕಿ ಈ ಪ್ರಾಜೆಕ್ಟ್ ಬಹಳ ವಿಭಿನ್ನವಾಗಿದೆ. ಹಿಂದೆಂದೂ ನೋಡದ ಶಿವಣ್ಣನನ್ನು ಈ ಚಿತ್ರದ ಮೂಲಕ ತೋರಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಶಿವಣ್ಣನ ಅಪ್ಪಟ ಅಭಿಮಾನಿಯಾಗಿರುವ ವೈಶಾಕ್ ತಮ್ಮ ಸಿನಿಮಾ ಜರ್ನಿಯನ್ನು ಈ ಚಿತ್ರದ ಮೂಲಕ ಆರಂಭಿಸುತ್ತಿರುವ ಖುಷಿಯಲ್ಲಿದ್ದಾರೆ. ಶೀಘ್ರದಲ್ಲೇ ಸ್ಟಾರ್ ಕಾಸ್ಟ್ ರಿವೀಲ್ ಮಾಡಲು ಚಿತ್ರತಂಡ ಯೋಜಿಸಿದೆ.
ಇದನ್ನೂ ಓದಿ: ವಿನಯ್ ರಾಜ್‌ಕುಮಾರ್ ಸರಳ ಪ್ರೇಮಕಥೆಗೆ ಮನಸೋತ ಮೋಹಕ ತಾರೆ