ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ ಮಂಗಳವಾರ ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವಿಶೇಷ ಕ್ಷಣವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದಲ್ಲಿ ತೀರ್ಪುಗಾರರು ಈ ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಟಿ ಧನ್ಯವಾದ ತಿಳಿಸಿದ್ದಾರೆ.
'ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೆ.ಜಿ.ಬಾಲಕೃಷ್ಣನ್ ಮತ್ತು ಜ್ಞಾನ್ ಸುಧಾ ಮಿಶ್ರಾ ಅವರು 'ಚಾಂಪಿಯನ್ಸ್ ಆಫ್ ಚೇಂಜ್ 2023' ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಭಾರತೀಯಳಾಗಿ ಹಾಗೂ ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ಮನರಂಜನಾ ವೇದಿಕೆಗಳ ಮೂಲಕ ತಾವು ನೀಡುತ್ತಿರುವ ಜಾಗೃತಿ ಮತ್ತು ಸಲಹೆಯಿಂದ ಹಲವರಿಗೆ ಸಹಕಾರಿಯಾಗುತ್ತಿರುವುದು ಖುಷಿ ತರಿಸಿದೆ. ನನ್ನ ಈ ಸಣ್ಣ ಪ್ರಯತ್ನವನ್ನು ಗುರುತಿಸಿದ್ದಕ್ಕೆ ಧನ್ಯವಾದ' ಎಂದು ಬರೆದಿದ್ದಾರೆ.
ನೆಟಿಜನ್ಸ್ ತಾರೆಗೆ ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ಕ್ಷೇತ್ರದ ಗಣ್ಯರು ಕೂಡ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಪ್ರಶಸ್ತಿ ನಿಮ್ಮ ಸಾಧನೆಗೆ ಸಿಕ್ಕ ಪ್ರತಿಫಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಸಿರು ಕಸೂತಿ ಸೀರೆಯಲ್ಲಿ ನೀವು ಬಹಳ ಸೊಗಸಾಗಿ ಕಾಣುತ್ತಿದ್ದೀರಿ ಎಂದು ಸೌಂದರ್ಯವನ್ನು ವರ್ಣಿಸಿದ್ದಾರೆ.
"ಚಾಂಪಿಯನ್ಸ್ ಆಫ್ ಚೇಂಜ್ ಮಹಾರಾಷ್ಟ್ರ" ಪ್ರಶಸ್ತಿಯನ್ನು 2011ರಿಂದ ನೀಡಲಾಗುತ್ತಿದೆ. ಧೈರ್ಯ, ಸಮಾಜ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿಯ ಮೌಲ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಖ್ಯಾತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾಡಿದ ವಿಶೇಷ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಮಂಗಳವಾರ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟರಾದ ಮನೋಜ್ ಬಾಜ್‌ಪೇಯಿ, ಅರ್ಜುನ್ ರಾಂಪಾಲ್, ಸೋನು ಸೂದ್, ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ನಿರ್ದೇಶಕರಾದ ಅಬ್ಬಾಸ್-ಮಸ್ತಾನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕರಣ್ ಜೋಹರ್, ಕೃತಿ ಸನೋನ್, ಸೋನು ಸೂದ್, ಮನೋಜ್ ಬಾಜ್‌ಪೇಯಿ, ಸಂದೀಪ್ ಸಿಂಗ್, ಸುನಿಲ್ ಗವಾಸ್ಕರ್, ನಿರ್ದೇಶಕರಾದ ಫರಾ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ, ಚಲನಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಸೇರಿದಂತೆ ಇತರರಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಅವರು ಪ್ರಶಸ್ತಿ ಪುರಸ್ಕೃತರಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು, ಭಾರತದ ಮಾಜಿ ಮುಖ್ಯ ನ್ಯಾಯಾಧೀಶರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ಪ್ರಶಸ್ತಿ ಆಯ್ಕೆ ಸಮಿತಿಯ ಉಪಾಧ್ಯಕ್ಷ ಮತ್ತು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಜ್ಞಾನ್, ವೇದಿಕೆಯ ಅಧ್ಯಕ್ಷ ನಂದನ್ ಕೆಆರ್ ಝಾ ಸೇರಿ ಇತರ ಗಣ್ಯರು ಹಾಜರಿದ್ದರು.
ಇದನ್ನೂ ಓದಿ: ಬೋನಿ ಕಪೂರ್-ಭೂತಾನಿ ಗ್ರೂಪ್ ಸಂಸ್ಥೆಗೆ ನೋಯ್ಡಾ ಬಳಿ ಫಿಲ್ಮ್ ಸಿಟಿ ಅಭಿವೃದ್ಧಿ ಹೊಣೆ