ಮಂಗಳೂರು (ದಕ್ಷಿಣ ಕನ್ನಡ): ನಗರದ ಹೊರವಲಯದಲ್ಲಿರುವ ಪ್ರಸಿದ್ಧ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಭಾಗಿಯಾಗಿದ್ದಾರೆ.
ಬಾವಿತೀರ್ಥ ಹಾಗೂ ಮಣ್ಣಿನಿಂದಲೇ ಪ್ರಸಿದ್ಧವಾಗಿರುವ 'ತಿಬಾರ್' ಎಂದೇ ಕರೆಯಲ್ಪಡುವ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಸದ್ಯ ಬ್ರಹ್ಮಕುಂಭಾಭಿಷೇಕ, ನಾಗಮಂಡಲದ ಕಾರ್ಯಕ್ರಮ ನಡೆಯುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿರುವುದು ವಿಶೇಷ.
ಬಾಲಿವುಡ್‌ನಲ್ಲಿ ಪ್ರಸಿದ್ಧರಾಗಿ ಬ್ಯುಸಿ ಶೆಡ್ಯೂಲ್ ಹೊಂದಿದ್ದರೂ ಅವರು ತವರುನೆಲ, ತುಳುನಾಡಿನ ದೈವ-ದೇವರುಗಳ ಬಗ್ಗೆ ಭಕ್ತಿ - ಪ್ರೀತಿಯನ್ನು ಇರಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ತುಳುನಾಡಿಗೆ ಆಗಮಿಸಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಶಿಬರೂರು ಕ್ಷೇತ್ರಕ್ಕೆ ಭೇಟಿ ಕೊಟ್ಟು, ಬ್ರಹ್ಮಕುಂಭಾಭಿಷೇಕದ ಹಿನ್ನೆಲೆ ಬೆಳ್ಳಿಕಲಶವನ್ನು ಅರ್ಪಿಸಿದ್ದಾರೆ.
ಕ್ಷೇತ್ರದ ಪ್ರಮುಖರು ನಾಗಮಂಡಲದ ಕುರಿತು ಮುಂಬೈನಲ್ಲಿ ಹಲವರನ್ನು ಭೇಟಿಯಾದ ಸಂದರ್ಭ ಶಿಲ್ಪಾ ಶೆಟ್ಟಿಯವರನ್ನು ಸಂಪರ್ಕಿಸಿದ್ದರು. ಈ ವೇಳೆ ಅವರು ಬ್ರಹ್ಮಕುಂಭಾಭಿಷೇಕಕ್ಕೆ ಬೇಕಾದ ಬೆಳ್ಳಿಯ ಕುಂಭವನ್ನು ಸೇವಾರೂಪದಲ್ಲಿ ಕೊಡುವ ಬಯಕೆ ವ್ಯಕ್ತಪಡಿಸಿದ್ದರು. ಅದರಂತೆ ಅವರು ಈ ಕಲಶವನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ ಪರ ಪ್ರಚಾರ ಮಾಡಲಿದ್ದಾರೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು - Sandalwood Stars Campaign