ಹೈದರಾಬಾದ್: ಬಾನೆತ್ತರಕ್ಕೆ ಹಾರಿದರೂ ತನ್ನ ಬೇರುಗಳನ್ನು ಮರೆಯಬಾರದು ಎಂಬ ಮಾತಿನಂತೆ ನಟಿ ಶಿಲ್ಪಾ ಶೆಟ್ಟಿ ತಮ್ಮ ಮೂಲಸ್ಥಾನಕ್ಕೆ ಆಗಮಿಸಿ ಇದೀಗ ಸದ್ದು ಮಾಡಿದ್ದಾರೆ. ಕರ್ನಾಟಕದ ಕರಾವಳಿ ಬೆಡಗಿ, ಅವಕಾಶ ಸಿಕ್ಕಾಗೆಲ್ಲಾ ತಾವು ತುಳು ನಾಡ ಕುವರಿ ಎಂಬುದನ್ನು ಸಾಬೀತು ಮಾಡುತ್ತಲೇ ಇರುತ್ತಾರೆ. ಕಳೆದೆರಡು ದಿನಗಳ ಹಿಂದೆ ಮಕ್ಕಳ ಸಮೇತವಾಗಿ ಮಂಗಳೂರಿಗೆ ಆಗಮಿಸಿದ ಅವರು ಅಲ್ಲಿ ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ತುಳುನಾಡಿನಲ್ಲಿ ಸಾಂಪ್ರದಾಯದಂತೆ ಈ ಬೆಡಗಿ ಕಂಡಿದ್ದು, ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಕರ್ನಾಟಕದ ತುಳು ಭಾಷಿಕರ ನಾಡಿನ ಪ್ರಖ್ಯಾತ ಧಾರ್ಮಿಕ ಸಾಂಪ್ರದಾಯವಾಗಿರುವ ದೈವ ಕೋಲದಲ್ಲಿ ನಟಿ ಶಿಲ್ಪಾ ಶೆಟ್ಟಿ ಭಾನುವಾರ ಭಾಗಿಯಾಗಿದ್ದಾರೆ. ತಮ್ಮ ಮಕ್ಕಳಿಗೆ ತಮ್ಮ ಸಂಸ್ಕೃತಿಯ ಹಿನ್ನೆಲೆ ಕುರಿತು ತಿಳಿಸಿದ್ದಾಗಿ, ತಮ್ಮ ಬೇರಿನ ಪರಿಚಯ ಮಾಡಿಸಿದ್ದಾಗಿ ಹೇಳಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಮಂಗಳೂರು ಭೇಟಿ ಮತ್ತು ದೈವ ಕೋಲದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಕ್ಕಳಾದ ವಿಯಾನ್ ಮತ್ತು ಸಮೀಷಾ ಅವರೊಂದಿಗೆ ಮಂಗಳೂರಿನಲ್ಲಿ ಕೊಡಮಾಂತಾಯ ದೈವ ಕೋಲವನ್ನು ವೀಕ್ಷಿಸಿದ ಅವರು, ತಮ್ಮನ್ನು ತುಳುನಾಡ ಹುಡುಗಿ ಎಂದು ಹೇಳಿಕೊಂಡಿದ್ದಾರೆ. ನನ್ನ ಬೇರಿಗೆ ಹಿಂತಿರುಗಿದೆ. ನನ್ನ ಮಕ್ಕಳಿಗೆ ನನ್ನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿದೆ. ಮಂಗಳೂರಿನ ನಾಗಮಂಡಲ ಹಾಗೂ ಸಾಂಪ್ರದಾಯಿಕ ಕೊಡಮಂತಾಯ ದೈವ ಕೋಲದಲ್ಲಿ ಪಾಲ್ಗೊಂಡೆ. ನನ್ನ ಮಕ್ಕಳು ಇದರಿಂದ ವಿಸ್ಮಯಗೊಂಡರು. ಎಷ್ಟು ಬಾರಿ ಈ ಕೋಲಾ ಪ್ರದರ್ಶನ ನೋಡಿದರೂ, ಸದಾ ಅದರ ಭಕ್ತಿ, ಶಕ್ತಿ ಮತ್ತು ನಂಬಿಕೆ ನನ್ನನ್ನು ಆಕರ್ಷಿಸುತ್ತದೆ ಎಂದು ಅಡಿ ಬರಹದೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ.
ತುಳು ನಾಡ ಜನರ ಧಾರ್ಮಿಕ ಆಚರಣೆಯಾಗಿರುವ ದೈವ ಕೋಲ ಇಲ್ಲಿನ ಸ್ಥಳೀಯ ಜನರ ಜೀವನ ಆಚರಣೆಯಾಗಿದೆ. ಸಂಗೀತ, ನೃತ್ಯ, ಧಾರ್ಮಿಕ ನಂಬಿಕೆ ವರ್ಣರಂಜಿತ ಸಾಂಸ್ಕೃತಿ ಪ್ರದರ್ಶನ ಇದಾಗಿದೆ. ವಿವಿಧ ವೈಯಕ್ತಿಕ ಅಥವಾ ಗುಂಪು ವ್ಯವಹಾರಗಳಲ್ಲಿ ದೇವರ ಮಧ್ಯಸ್ಥಿಕೆಯನ್ನು ಪಡೆಯಲು ಹಳ್ಳಿಗರು ಸೇರಿ ನಡೆಸುವ ಆಚರಣೆ ಇದಾಗಿದೆ. ದೈವದ ಜೊತೆಗಿನ ಆಧ್ಯಾತ್ಮಿಕ ಸಂಪರ್ಕದ ಜೊತೆಗೆ ಸಮುದಾಯದ ಸಾಮಾಜಿಕ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಈ ಆಚರಣೆ ಸಹಾಯ ಮಾಡುತ್ತದೆ.
ಈ ದೈವ ಕೋಲ ಸಂಪ್ರದಾಯದ ಕುರಿತು ಅದ್ವುತವಾಗಿ ನಟ ರಿಷಬ್ ಶೆಟ್ಟಿ ತಮ್ಮ 'ಕಾಂತಾರ' ಸಿನಿಮಾದಲ್ಲಿ ತೋರಿಸಿದ್ದಾರೆ. ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿರುವ ಈ ಸಂಪ್ರದಯ ಲಕ್ಷಾಂತರ ಮಂದಿ ಹೃದಯ ಗೆದ್ದಿತು.
ಇದನ್ನೂ ಓದಿ: ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಭೇಟಿ: ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿ