'2023' ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಬಹಳ ವಿಶೇಷ ಅಂತಲೇ ಹೇಳಬಹುದು. ಪಠಾಣ್, ಜವಾನ್ ಮತ್ತು ಡಂಕಿಯಂತಹ ಸರಣಿ ಚಿತ್ರಗಳ ಮೂಲಕ ಸಖತ್ ಸದ್ದು ಮಾಡಿದ್ದಾರೆ. ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರೋ ಎಸ್ಆರ್ಕೆ ಯಾವುದೇ ಗ್ಯಾಪ್ ಇಲ್ಲದೇ ಮುಂದಿನ ಚಿತ್ರಗಳನ್ನು ಮಾಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಪಠಾಣ್ಗೂ ಮುನ್ನ ನಾಲ್ಕು ವರ್ಷ ಬ್ರೇಕ್ ಪಡೆದಿದ್ದ ಹಿನ್ನೆಲೆ ಅಭಿಮಾನಿಗಳು, ನಿರಂತರವಾಗಿ ಸಿನಿಮಾಗಳನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಶಾರುಖ್ ಶೀಘ್ರದಲ್ಲೇ ತಮ್ಮ ಮುಂಬರುವ ಯೋಜನೆ ಘೋಷಿಸೋ ತಯಾರಿಯಲ್ಲಿದ್ದಾರೆ. ಅಭಿಮಾನಿಗಳೂ ಕೂಡ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಇದೀಗ ಎಸ್ಆರ್ಕೆಗೆ ಸಂಬಂಧಿಸಿದ ಸುದ್ದಿಯೊಂದು ಸಖತ್ ಸದ್ದು ಮಾಡುತ್ತಿದೆ. ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ಕಿಂಗ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಗೀತು ಮೋಹನ್ ದಾಸ್ ಅವರು ಅದ್ಧೂರಿಯಾಗಿ ನಿರ್ದೇಶಿಸುತ್ತಿದ್ದಾರೆ. ಈ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಅತಿಥಿ ಪಾತ್ರಕ್ಕಾಗಿ ಗೀತು ಮೋಹನ್ ದಾಸ್ ಅವರು ಶಾರುಖ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದೊಂದು ಪ್ರಬಲ ಪಾತ್ರ. ಶಾರುಖ್ ಮಾತ್ರ ಇದನ್ನು ಮಾಡಲು ಸಾಧ್ಯ ಎಂದು ತಂಡ ಬಲವಾಗಿ ನಂಬಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇವೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.
ಅಷ್ಟೇ ಅಲ್ಲ, ಕೆಜಿಎಫ್ ಸ್ಟಾರ್ ಯಶ್ ಅವರ 19ನೇ ಪ್ರಾಜೆಕ್ಟ್ 'ಟಾಕ್ಸಿಕ್' ನಲ್ಲಿ ಮೂವರು ನಾಯಕಿಯರು ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಜೊತೆಗೆ ಇನ್ನಿಬ್ಬರು ನಾಯಕಿಯರೂ ಕೂಡ ಇರಲಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕರೀನಾ ಕಪೂರ್ ಖಾನ್ ಈ ಚಿತ್ರದ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಕರೀನಾ ಜೊತೆಗೆ ಶ್ರುತಿ ಹಾಸನ್ ಮತ್ತು ಸಾಯಿ ಪಲ್ಲವಿ ಅವರನ್ನು ಚಿತ್ರದ ಭಾಗವಾಗಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಟಾಕ್ಸಿಕ್ ಅದ್ಧೂರಿಯಾಗಿ ತೆರೆಕಾಣಲಿದೆ.
ಇದನ್ನೂ ಓದಿ: 'ಕೆಟಿಎಮ್' ಟ್ರೇಲರ್ ರಿಲೀಸ್: ದೀಕ್ಷಿತ್ ಶೆಟ್ಟಿ ಸಿನಿಮಾಗೆ ರಿಷಬ್, ರಶ್ಮಿಕಾ ಸೇರಿದಂತೆ ಸೌತ್ ಸೆಲೆಬ್ರಿಟಿಗಳ ಸಾಥ್
ಸದ್ಯ 'ಟಾಕ್ಸಿಕ್' ಶೀರ್ಷಿಕೆ, ನಿರ್ದೇಶಕರ ಹೆಸರು ಘೋಷಣೆಯಾಗಿದ್ದು ಬಿಟ್ಟರೆ ಹೆಚ್ಚೇನೂ ಸುದ್ದಿ ಇಲ್ಲ. ಸಿನಿಮಾ ಬಗೆಗಿನ ಅಧಿಕೃತ ಅಪ್ಡೇಟ್ಸ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಕೆಜಿಎಫ್ ಸ್ಟಾರ್ನ 'ಟಾಕ್ಸಿಕ್' ಅವತಾರ ಹೇಗಿರಲಿದೆ ಎಂದು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 'ದಿಗಂತ್ ನನ್ನ ಕ್ರಶ್'- ಸಂಗೀತಾ ಶೃಂಗೇರಿ; ತೆರೆ ಹಂಚಿಕೊಂಡ 'ಮಾರಿಗೋಲ್ಡ್' ಜೋಡಿಯ ಸುಂದರ ಫೋಟೋಗಳಿಲ್ಲಿವೆ