ಮಳೆಬಿಲ್ಲು ಸಿನಿಮಾ ಮೂಲಕ ಗಮನ ಸೆಳೆದಿರುವ ಯುವಪ್ರತಿಭೆ ಶರತ್ ಅಭಿನಯದ ಮತ್ತು ನಿರ್ದೇಶಕ ರುದ್ರಶಿವ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಶಭ್ಭಾಷ್'. ಸಂಕ್ರಾಂತಿ ಶುಭ ಸಂದರ್ಭದಲ್ಲಿ ಸೆಟ್ಟೇರಿದ ಶಭ್ಬಾಷ್ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರತಂಡದವರು ಬಹಳ ಉತ್ಸಾಹದಿಂದ ಶೂಟಿಂಗ್ನಲ್ಲಿ ಭಾಗಿಯಾಗಿದ್ದು, ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.
ನಿರ್ದೇಶಕ ರುದ್ರಶಿವ ಯೋಜನೆಯಂತೆ, ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಏಳು ದಿನಗಳ ಚಿತ್ರೀಕರಣ ಮುಗಿಸಿಕೊಂಡು, ಚನ್ನಗಿರಿಯ ಶಾಂತಿಸಾಗರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
ಸೇತುವೆ ಮೇಲೆ ಶೂಟಿಂಗ್: ಚನ್ನಗಿರಿಯ ಶಾಂತಿಸಾಗರ ಸೂಳೆಕೆರೆ ಅಂತಲೂ ಕರೆಸಿಕೊಳ್ಳುತ್ತದೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯೂ ಶಾಂತಿಸಾಗರಕ್ಕಿದೆ. ಈ ಕೆರೆಗೂ ಹನ್ನೆರಡನೇ ಶತಮಾನಕ್ಕೂ ಎಂದಿಗೂ ಸಡಿಲವಾಗದಂಥ ಕೊಂಡಿಗಳಿವೆ. ಸ್ವರ್ಗಾವತಿ ಪಟ್ಟಣದ ದೊರೆ ವಿಕ್ರಮರಾಜನ ಸುಪುತ್ರಿ ಶಾಂತವ್ವ ತನಗಾದ ಅವಮಾನಕ್ಕೆ ಪ್ರತಿಭಟನೆಯ ಸ್ವರೂಪದಲ್ಲಿ ಈ ಬೃಹತ್ ಕೆರೆಯನ್ನು ಸೃಷ್ಟಿಸಿದಳೆಂಬ ಪ್ರತೀತಿ ಇದೆ. ಇದರ ಜೊತೆಗೆ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಿಸಿರುವ ಸೇತುವೆಯೊಂದು ಪ್ರಧಾನ ಆಕರ್ಷಣೆ. ಎರಡು ಬೆಟ್ಟಗಳನ್ನು ಸೇರಿಸಿ ಈ ಸೇತುವೆ ಕಟ್ಟಿಸಲಾಗಿದೆ. ಇಂದಿಗೂ ಅಚ್ಚರಿಯಾಗಿ ಕಾಣಿಸುವ ಈ ಸೇತುವೆಯ ಮೇಲೆ ಶಭ್ಬಾಷ್ ಚಿತ್ರೀಕರಣ ನಡೆಸಲಾಗಿದೆ. ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಆ ಸೇತುವೆ ಮೇಲೆ ಚಿತ್ರೀಕರಣ ನಡೆಸುವುದು ಸಾಹಸವೇ ಸರಿ. ಕೆಲವೇ ಕೆಲ ಕಲಾವಿದರು, ತಂತ್ರಜ್ಞರು ಮಾತ್ರವೇ ಅಲ್ಲಿಗೆ ತಲುಪಲು ಸಾಧ್ಯವಾಗಿತ್ತು.
ಇದನ್ನೂ ಓದಿ: ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಬಿಡುಗಡೆ: ಮೊದಲ ದಿನದ ಕಲೆಕ್ಷನ್ ಎಷ್ಟು?
ಸಿನಿಮಾದ ಶೂಟಿಂಗ್ ನಿರ್ದೇಶಕ ರುದ್ರಶಿವ ಸೇರಿದಂತೆ ಚಿತ್ರತಂಡದ ಪಾಲಿಗೆ ಅಮೋಘ ಅನುಭವವನ್ನು ತುಂಬಿದೆ. ಛಾಯಾಗ್ರಾಹಕರು, ಕಲಾವಿದರು, ತಾಂತ್ರಿಕ ವರ್ಗದವರು ಸೇರಿ ಈ ಭಾಗದಲ್ಲಿರುವ ಪ್ರಸಿದ್ಧ ದೇವಾಲಯ, ಹಳ್ಳಿಗಳಲ್ಲಿ ನಾಯಕ ನಾಯಕಿಯ ಚಿತ್ರೀಕರಣ ನಡೆಸಿದ್ದಾರೆ. ಇಂಥದ್ದೊಂದು ಸುಂದರ ವಾತಾವರಣದಲ್ಲಿ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ತೀರದಾಚೆಗೆ ಹಾರಿ ಹೋಗುವಾಸೆ: ಪ್ರೇಕ್ಷಕರ ಮನಸೆಳೆದ 'ಸಾರಾಂಶ' ಸಾಂಗ್
ಶಭ್ಬಾಷ್ ಆ್ಯಕ್ಷನ್ ಡ್ರಾಮಾ ಜಾನರ್ನ ಸಿನಿಮಾ. ಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಚೊಚ್ಚಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 (ACE 22) ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿರೋ ಶಭ್ಭಾಷ್ ಚಿತ್ರತಂಡ ಅದಷ್ಟು ಬೇಗ ಶೂಟಿಂಗ್ ಮುಗಿಸಿ ಟ್ರೇಲರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.