ಕೋಯಿಕ್ಕೋಡ್, ಕೇರಳ: ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಬೆಂಗಾಳಿ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆಪಾದನೆ ಬೆನ್ನಲ್ಲೇ ಮತ್ತೊಬ್ಬ ವ್ಯಕ್ತಿ ಇದೀಗ ಅವರ ವಿರುದ್ಧ ಧ್ವನಿ ಎತ್ತಿದ್ದರು. ಆದರೆ, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಕೋಯಿಕ್ಕೋಡ್ ಮೂಲದ ನಿವಾಸಿ ಇದೀಗ ತಮ್ಮ ದೂರನ್ನು ಹಿಂಪಡೆದಿದ್ದಾರೆ. ಮಂಕವು ನಿವಾಸಿ ಸಜೀರ್ ಈ ಸಂಬಂಧ ದೂರು ಸಲ್ಲಿಸುತ್ತಿದ್ದಂತೆ, ಅನೇಕ ಅನಾಮಧೇಯರು ಕರೆ ಮಾಡಿ, ದೂರು ಹಿಂಪಡೆಯುವಂತೆ ಒತ್ತಡ ಹಾಕಿದರು. ಈ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದೇನೆ ಎಂದು ಸಜೀರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ವಿಶೇಷ ತನಿಖಾ ತಂಡದ ಮುಂದೆ ಸ್ಪಷ್ಟೀಕರಿಸುವುದಾಗಿ ಸಜೀರ್ ತಿಳಿಸಿದ್ದಾರೆ. ರಂಜಿತ್ ಬೆಂಗಳೂರಿನ ಹೋಟೆಲ್ನಲ್ಲಿ ನನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅವರು ನನ್ನ ಬೆತ್ತಲೆ ಫೋಟೋ ಪಡೆದಿದ್ದರು. ಅಲ್ಲದೇ, ನನ್ನ ಫೋಟೋವನ್ನು ರಂಜಿತ್ ಅವರ ಚಿತ್ರ ಪ್ರಮುಖ ನಟಿಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ಸಜೀರ್ ಆರೋಪಿಸಿದ್ದಾರೆ.
ಸಿನಿಮಾ ನಟನಾಗುವ ಉದ್ದೇಶದಿಂದ ಕೋಯಿಕ್ಕೋಡ್ನ ಸಿನಿಮಾ ಲೊಕೇಷನ್ನಲ್ಲಿ ಮೊದಲಿಗೆ ನಿರ್ದೇಶಕರನ್ನು ಭೇಟಿಯಾಗಿದ್ದರು. ಅವಕಾಶ ಕೇಳಿಕೊಂಡು ಹೋಟೆಲ್ ರೂಮ್ಗೆ ಅವರನ್ನು ಕಾಣಲು ಹೋಗಿದ್ದೆ, ಆಗ ಅವರು ಟಿಶ್ಯೂವೊಂದರಲ್ಲಿ ಫೋನ್ ನಂಬರ್ ಬರೆದು, ಎರಡು ದಿನದ ಬಳಿಕ ಬೆಂಗಳೂರಿನ ತಾಜ್ ಹೋಟೆಲ್ಗೆ ಬರುವಂತೆ ಸಂದೇಶ ನೀಡಿದ್ದರು.
ಅವಕಾಶದ ಹುಡುಕಾಟದ ಉದ್ದೇಶದಿಂದ ನಾನು ಬೆಂಗಳೂರಿನ ಹೋಟೆಲ್ಗೆ ರಾತ್ರಿ 10ರ ಸಮಯಕ್ಕೆ ಹೋದೆ. ಆಗ ಅವರು ಹಿಂಬದಿ ಗೇಟ್ನಿಂದ ರೂಮ್ಗೆ ಬರುವಂತೆ ಸೂಚಿಸಿದರು. ಈ ವೇಳೆ ಕೋಣೆಗೆ ಹೋದಾಗ ಅವರು ಮದ್ಯ ಸೇವನೆ ಮಾಡುವಂತೆ ಬಲವಂತ ಮಾಡಿದರು. ಬಳಿಕ ವಿವಸ್ತ್ರಗೊಳಿಸಿ ಅನೈಸರ್ಗಿಕ ವಿಧಾನದಲ್ಲಿ ದೌರ್ಜನ್ಯ ಎಸಗಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೇಮಾ ಸಮಿತಿ ವರದಿ ಬಳಿಕ ಮಲಯಾಳಂ ಚಲನಚಿತ್ರದಲ್ಲಿ ನಡೆಯುತ್ತಿರುವ ಮೀಟೂ ಅಭಿಯಾನದ ನಡುವೆ ಮೊದಲ ಬಾರಿ ಪುರುಷ ವ್ಯಕ್ತಿಯೊಬ್ಬರು ನಿರ್ದೇಶಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಬಂಗಾಳಿ ನಟಿ ಮಾಡಿದ ಆರೋಪದ ಬಳಿಕ ರಂಜಿತ್ ಕೇರಳ ಚಲನಚಿತ್ರ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿಗೆ ಜಸ್ಟಿಸ್ ಹೇಮಾ ಸಮಿತಿ ಕೇರಳ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟಿತ್ತು.
ಇದನ್ನೂ ಓದಿ: ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ದೂರು ದಾಖಲಿಸಿದ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ