ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಕಲಾವಿದರು ನಟ, ಪೋಷಕ ಪಾತ್ರ, ಖಳನಾಯಕ, ಕಾಮಿಡಿಯನ್, ರೊಮ್ಯಾಂಟಿಕ್ ಹೀರೋ, ಆ್ಯಕ್ಷನ್ ಸ್ಟಾರ್ ಹೀಗೆ ನಾನಾ ಪಾತ್ರಗಳನ್ನು ನಿರ್ವಹಿಸುತ್ತಾರೆ. ಕೆಲವರು ವಿಭಿನ್ನ ಪಾತ್ರಗಳಿಗೂ ಸೂಟ್ ಆದರೆ, ಹಲವರು ತಮಗೆ ಸರಿಹೊಂದುವ ಪಾತ್ರವನ್ನಾರಿಸಿ ಅದಕ್ಕೆ ತಕ್ಕ ನಟನೆ ಮಾಡಿ ಗಮನ ಸೆಳೆಯುತ್ತಾರೆ. ಹೀಗೆ ಪಾತ್ರಗಳಿಗೆ ಸಂಪೂರ್ಣ ಜೀವ ತುಂಬುವ ಜವಾಬ್ದಾರಿ ಪ್ರತೀ ಕಲಾವಿದರ ಮೇಲಿರುತ್ತದೆ. ಇದೀಗ ಕಾಮಿಡಿ ಪಾತ್ರಗಳ ಮೂಲಕ ಜನಮನ ಗೆದ್ದಿರುವ ಸ್ಯಾಂಡಲ್ವುಡ್ ನಟರೊಬ್ಬರು ಖಳನಾಯಕನಾಗಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ.
ಕಾಮಿಡಿ ಮ್ಯಾನರಿಸಂನಿಂದಲೇ ಕನ್ನಡ ಚಿತ್ರರಂಗದಲ್ಲಿ 2 ದಶಕಗಳಿಂದ ತಮ್ಮದೇ ಆದ ಬೇಡಿಕೆ ಹೊಂದಿರುವ ನಟ ಎಂದರೆ ಅದು ಮಿತ್ರ. ಕಿರುತೆರೆ, ಹಿರಿತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲ ರೀತಿಯ ಪಾತ್ರಕ್ಕೂ ತಮ್ಮನ್ನು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಮಿತ್ರ ಅವ್ರ ಖದರ್ ಬದಲಾಗಿದೆ. ಲುಕ್ ವಿಭಿನ್ನವಾಗಿದೆ.
ಹೌದು, ಸ್ಯಾಂಡಲ್ವುಡ್ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ 'ಕರಾವಳಿ' ಚಿತ್ರದಲ್ಲಿ ಮಿತ್ರ ಅವರು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕಾಗಿ ಮಿತ್ರ ಅವರ ಗೆಟಪ್ ಕೂಡ ಬದಲಾಗಿದೆ. ಈ ಒಂದು ಸಿನಿಮಾದ ಲುಕ್ ಮಿತ್ರ ಅವರ ಕೆರಿಯರ್ನಲ್ಲಿ ಟರ್ನಿಂಗ್ ಪಾಯಿಂಟ್ ಆಗಲಿದೆ.
ಈವರೆಗೆ ಸಿನಿಮಾಗಳಲ್ಲಿ ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದ ಮಿತ್ರ ಇನ್ಮುಂದೆ ಸ್ಯಾಂಡಲ್ವುಡ್ನ ಖಡಕ್ ವಿಲನ್. ಗಡ್ಡ ಬಿಟ್ಟು ನೋಟ ಬದಲಾಯಿಸಿಕೊಂಡ ಮೇಲೆ ವಿಭಿನ್ನ ಪಾತ್ರಗಳು ನಟನನ್ನು ಹುಡುಕಿ ಬರುತ್ತಿವೆ. ಹಾಗಾಗಿ, ಸದ್ಯ ಸ್ಟೈಲಿಷ್ ವಿಲನ್ ಲುಕ್ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ಮಿತ್ರ.
ಇದನ್ನೂ ಓದಿ: 'ಮ್ಯಾಕ್ಸ್' ಆಟ ಶುರು: ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಿದ ಅಭಿನಯ ಚಕ್ರವರ್ತಿ - Sudeep Max Teaser
ಮಿತ್ರ ಅವರ ಲೇಟೆಸ್ಟ್ ಫೋಟೋಶೂಟ್ ನೋಡಿದರೆ, ವಾವ್ಹ್ ಮಿತ್ರ ಅವರು ಹೀಗೂ ಕಾಣಿಸುತ್ತಾರಾ? ಅನ್ನಿಸೋದು ಗ್ಯಾರಂಟಿ. ವಿಲನ್ ಲುಕ್ನಲ್ಲಿ ಸಾಕಷ್ಟು ವಿಭಿನ್ನ ಶೇಡ್ಗಳಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಫೋಟೋಶೂಟ್ ಮಾಡಿರೋದು ಕರಾವಳಿ ಸಿನಿಮಾದ ಕ್ಯಾಮರಾಮ್ಯಾನ್ ಅಭಿಮನ್ಯು ಸದಾನಂದ್. ಮಿತ್ರ ಅವರ ಲುಕ್ ಅನ್ನು ಸಖತ್ ಸ್ಟೈಲಿಷ್ ಮಾಡಿರೋದು ಕಾಲಿವುಡ್ನ ಸ್ಟೈಲಿಷ್ಟ್ ಕಣ್ಮಣಿ. ಮಿತ್ರ ಅವ್ರ ಈ ಲುಕ್ ಬರೀ ಲುಕ್ ಆಗಿ ಉಳಿಯೋದಿಲ್ಲ. ಕರಾವಳಿ ಸಿನಿಮಾ ಬಿಟ್ಟು ಕನ್ನಡದ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಬ್ಯುಸಿಯಾದ ಸ್ಯಾಂಡಲ್ವುಡ್ ಚೆಲುವೆ ಇತಿ ಆಚಾರ್ಯ: ಹೊಸ ಸಿನಿಮಾ ಘೋಷಣೆ - Iti Acharya
ಕಲಾವಿದರಾದವರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು. ವಯಸ್ಸಿಗೆ ತಕ್ಕಂತೆ ತಮ್ಮನ್ನ ತಾವು, ಪಾತ್ರಗಳನ್ನು ಬದಲಾಯಿಸಿಕೊಳ್ಳಬೇಕು ಅನ್ನೋದನ್ನು ಮಿತ್ರ ಅವರು ಫಾಲೋ ಮಾಡಿದಂತಿದೆ. ಸದ್ಯ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ನಲ್ಲಿ ಮಿತ್ರ ಮಿಂಚುತ್ತಿದ್ದು, 'ಕರಾವಳಿ' ವೀಕ್ಷಿಸೋ ಕುತೂಹಲ ಹೆಚ್ಚಾಗಿದೆ.