2024 ಲಕ್ಕಿ ವರ್ಷ ಅಂದುಕೊಂಡು ಶುರು ಮಾಡಿದ ಕನ್ನಡ ಚಿತ್ರರಂಗದ ಮಂದಿಗೆ ಅಷ್ಟೊಂದು ಶುಭಲಾಭವಾಗಿಲ್ಲ. ಯಾಕಂದ್ರೆ ಸಂಕ್ರಾಂತಿ ಹೊತ್ತಿಗೆ ಒಂದೇ ಒಂದು ಕನ್ನಡ ಚಿತ್ರ ಬಿಡುಗಡೆಯಾಗದೇ, ಈ ವರ್ಷದ ಕಥೆ ಏನಪ್ಪಾ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಜನವರಿ ಮುಗಿಯುವ ಹೊತ್ತಿಗೆ 16 ಚಿತ್ರಗಳು ಬಿಡುಗಡೆಯಾದವು. ಆದರೆ ಫೆಬ್ರವರಿ ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಚಿತ್ರೋತ್ಸವ ಸುಗ್ಗಿ ಶುರುವಾಗಿದೆ.
ಫೆಬ್ರವರಿ 2ರಂದು ಒಟ್ಟು ಐದು ಚಿತ್ರಗಳು ಬಿಡುಗಡೆಯಾಗಿವೆ. ರವಿ ಬಸ್ರೂರು ಮಗನ ಕ್ಲಿಕ್, ನಿಶ್ಚಿತ್ ಕರೋಡಿ ಅಭಿನಯದ ಸಪ್ಲೈಯರ್ ಶಂಕರ, ಯತಿರಾಜ್ ನಿರ್ದೇಶನದ ಸತ್ಯಂ ಶಿವಂ, ಕ್ರಶ್ ಮತ್ತು ಯಥಾಭವ ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳು ಬಿಡುಗಡೆಯಾಗಿದ್ದಷ್ಟೇ ಗೊತ್ತು, ಮಿಕ್ಕಂತೆ ಯಾವ ಚಿತ್ರ ಎಷ್ಟು ಪ್ರದರ್ಶನ ಕಂಡಿತು, ಎಷ್ಟು ಕಲೆಕ್ಷನ್ ಆಯಿತು, ಯಾವ ಚಿತ್ರ ಸಿನಿಮಾ ಪ್ರೇಕ್ಷಕ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
7 ಚಿತ್ರ ಬಿಡುಗಡೆಗೆ ಸಜ್ಜು: ಹೀಗಿರುವಾಗ, ಫೆಬ್ರವರಿ 9ರಂದು ಒಟ್ಟು ಏಳು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈ ಪೈಕಿ ವಿನಯ್ ರಾಜ್‌ಕುಮಾರ್ ಅಭಿನಯದ ಒಂದು ಸರಳ ಪ್ರೇಮಕಥೆ, ರಾಜವರ್ಧನ್ ಅಭಿನಯದ ಪ್ರಣಯಂ, ಶ್ರೀ ಮಹಾದೇವ್ ಅಭಿನಯದ ಜಸ್ಟ್ ಪಾಸ್, ಪೃಥ್ವಿ ಅಂಬಾರ್ ಅಭಿನಯದ ಜೂನಿ, ರಾಗಿಣಿ ಅಭಿನಯದ ಇ-ಮೇಲ್, ಹೊಸಬರ ಮಾಯೆ ಆ್ಯಂಡ್ ಕಂಪನಿ, ಮತ್ತು ನಗುವಿನ ಹೂಗಳ ಮೇಲೆ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.
ಈ ಏಳು ಚಿತ್ರಗಳಲ್ಲಿ ಈ ವರ್ಷ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಅಂದ್ರೆ ವಿನಯ್ ರಾಜ್ ಕುಮಾರ್ ಅಭಿನಯದ ಒಂದು ಸರಳ ಪ್ರೇಮಕಥೆ. ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಈ ಚಿತ್ರ ಹಾಡುಗಳಿಂದ ಸಿನಿಮಾಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಜೊತೆಗೆ, ವಿನಯ್ ರಾಜ್‌ಕುಮಾರ್ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷ ಆಗಿದೆ. ಈ ಕಾರಣಕ್ಕೆ ದೊಡ್ಮನೆ ಹುಡುಗ ಸಿನಿಮಾ ಸಾಕಷ್ಟು ನಿರೀಕ್ಷೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ದೊಡ್ಮನೆಯ ಅಭಿಮಾನಿಯಾಗಿರುವ ನಿರ್ಮಾಪಕ ಮೈಸೂರು ರಮೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಇದರ ಜೊತೆಗೆ ರಾಜವರ್ಧನ್ ಅಭಿನಯದ ಪ್ರಣಯಂ, ಪೃಥ್ವಿ ಅಂಬಾರ್ ಅಭಿನಯದ ಜೂನಿ, ರಾಗಿಣಿ ಅಭಿನಯದ ಇಮೇಲ್ ಚಿತ್ರಗಳ ಸ್ವಲ್ಪಮಟ್ಟಿಗೆ ಗಮನ ಸೆಳೆಯುತ್ತಿವೆ. ಈ ಏಳು ಚಿತ್ರಗಳಲ್ಲಿ ಯಾವ ಸಿನಿಮಾ ನೋಡಬೇಕು ಎಂದು ಪ್ರೇಕ್ಷಕರು ಕೂಡ ಗೊಂದಲಕ್ಕೆ ಬಿದ್ದಿದ್ದಾರೆ. ಇದು ಈ ವಾರದ ಕಥೆಯಾದರೆ, ಮುಂದಿನ ವಾರ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಸಹ ದೊಡ್ಡದಿದೆ. ರವಿಕೆ ಪ್ರಸಂಗ, 5ಡಿ, ಮಂಡ್ಯ ಹೈದ, ಸಾರಾಂಶ, ಲೇಡೀಸ್ ಬಾರ್ ಮುಂತಾದ ಚಿತ್ರಗಳು ಬಿಡುಗಡೆಯಾಗುತ್ತಿರುವ ಕುರಿತು ಈಗಾಗಲೇ ಸುದ್ದಿ ಇದೆ. ಈ ಪಟ್ಟಿಗೆ ಅಂತಿಮವಾಗಿ ಇನ್ನೆಷ್ಟು ಚಿತ್ರಗಳು ಸೇರ್ಪಡೆಯಾಗುತ್ತವೋ ಕಾದು ನೋಡಬೇಕು.
ಒಟ್ಟಿನಲ್ಲಿ ಕನ್ನಡದಲ್ಲಿ ಕಳೆದ ಎರಡ್ಮೂರು ವಾರಗಳಿಂದ ಪ್ರತೀ ವಾರ ಕನಿಷ್ಠ ಐದು ಚಿತ್ರಗಳಾದರೂ ಬಿಡುಗಡೆಯಾಗುತ್ತಿವೆ. ಈ ಟ್ರೆಂಡ್ ಇನ್ನೂ ಎರಡು ತಿಂಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಚಿತ್ರಗಳು ಬಿಡುಗಡೆಯಾಗುತ್ತಿವೆ ಆದರೂ, ಇಲ್ಲಿ ಯಾವುದೇ ದೊಡ್ಡ ಸ್ಟಾರ್ ಅಥವಾ ನಿರೀಕ್ಷಿತ ಚಿತ್ರಗಳು ಇಲ್ಲದಿರುವುದರಿಂದ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳತ್ತ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ, ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿರುವ ಅಷ್ಟೊಂದು ಚಿತ್ರಗಳಲ್ಲಿ ಯಾವ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆದುಕೊಂಡು ಬರುತ್ತದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಯಾಮಿ ಗೌತಮ್ ನಟನೆಯ 'ಆರ್ಟಿಕಲ್ 370' ಸಿನಿಮಾ ಟ್ರೇಲರ್ ಔಟ್