ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳ ಬಳಕೆ ಮಾಡಿಕೊಂಡು ಜನಪ್ರಿಯತೆ ಹೊಂದುವ ಪ್ರತಿಭೆಗಳು ಸದಾ ಕಾಲ ಜನರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ ಎಂಬುದಕ್ಕೆ ಉದಾಹರಣೆ ಸಮೀರಾ ಭಾರಧ್ವಾಜ್. ಇವರು ಗಾಯಕಿ, ನಟಿ ಹಾಗೂ ಡಬ್ಬಿಂಗ್ ಕಲಾವಿದೆ. ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಸಮೀರಾ ಇನ್ಸ್ಟಾಗ್ರಾಂ ಮೂಲಕ ಸಾಮಾನ್ಯ ಜನರ ನಾಡಿಮಿಡಿತವನ್ನು ಅರಿತು ಅವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಮಗಳಿಗೆ ವಿಚಿತ್ರ ರೀತಿಯ ಪ್ರಶ್ನೆ ಕೇಳುವ ತಾಯಿಯಾಗಿ, ವಾಟ್ಸಾಪ್ ಗ್ರೂಪ್ನಲ್ಲಿ ಕುಟುಂಬ ಸದಸ್ಯರನ್ನು ಒಟ್ಟುಗೂಡಿಸುವ ಪ್ರಯತ್ನ, ಆಧುನಿಕ ತಾಯಂದಿರ ತಳಮಳದಂತಹ ಜನಕ್ಕೆ ಹತ್ತಿರವಾಗುವ ಕಲ್ಪನೆಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಹೊರ ತರುವ ಸಮೀರಾ ಸಿಕ್ಕಾಪಟ್ಟೆ ಸೆನ್ಸೇಷನ್ ಕೂಡ ಸೃಷ್ಟಿಸಿದ್ದಾರೆ. ಈ ಎಲ್ಲಾ ಕುರಿತು ಈಟಿವಿ ಭಾರತ್ ಜೊತೆ ತಮ್ಮ ಪ್ರಯಾಣದ ಬಗ್ಗೆ ಅವರು ಹಂಚಿಕೊಂಡಿದ್ದಾರೆ.
ಆರಂಭದಲ್ಲೇ ಪ್ರತಿಭೆ ಪತ್ತೆ: ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಇದನ್ನು ಮುಕ್ತವಾಗಿ ಪ್ರದರ್ಶಿಸುವುದು ಅಗತ್ಯ. ಇದಕ್ಕೆ ನಮ್ಮ ಪ್ರಯತ್ನಗಳೇ ಅವಕಾಶವನ್ನು ಸೃಷ್ಟಿಸುತ್ತವೆ ಎನ್ನುತ್ತಾರೆ ಸಮೀರಾ. ಹೈದಾರಾಬಾದ್ನಲ್ಲಿ 8ನೇ ತರಗತಿಯವರೆಗೆ ಓದಿದ ಸಮೀರಾ ತಂದೆ ಉದ್ಯೋಗ ನಿಮಿತ್ತ ಚೆನ್ನೈಗೆ ವಾಸ ಸ್ಥಳ ಬದಲಾಯಿಸಿದರು. ಅಜ್ಜಿ ಮತ್ತು ತಾಯಿಯ ಸಂಗೀತದಿಂದ ಪ್ರೇರಣೆಯಾಗಿ, ಅದು ಕೂಡ ಒಲಿಯಿತು. ಇದಕ್ಕಾಗಿ ಔಪಚಾರಿಕವಾಗಿ ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತವನ್ನು ಬಾಲ್ಯದಲ್ಲೇ ಕಲಿತರು.
ಇದರ ಹೊರತಾಗಿ ನಾಟಕ, ಮಿಮಿಕ್ರಿ ಮತ್ತು ಡ್ಯಾನ್ಸ್ಗಳಲ್ಲಿ ಕೂಡ ಅವರು ಪ್ರತಿಭೆ ತೋರಿಸಿದ್ದು, ಅನೇಕ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಾರೆ. ನಾಲ್ಕನೇ ತರಗತಿಯಲ್ಲಿದ್ದಾಗಲೇ ಟಿವಿ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡರು. 14ನೇ ವಯಸ್ಸಿಗೆ ಸಣ್ಣ ಸಿನಿಮಾವೊಂದರಲ್ಲಿ ಅವರು ಮೊದಲ ಹಾಡನ್ನು ಹಾಡಿದರು. ಇದಾದ ಬಳಿಕ, ಚಿತ್ರಗಳಲ್ಲಿ ಡಬ್ಬಿಂಗ್ ಅವಕಾಶ ಒದಗಿಬಂತು. ಮನೋರಂಜನಾ ಉದ್ಯಮದಲ್ಲಿ ಮಿಂಚಲು ಪಾಡುತಾ ತಿಯಗ ಮತ್ತು ಸೂಪರ್ ಸಿಂಗರ್ ಸೀಸನ್ 9 ಕಾರ್ಯಕ್ರಮ ಅಡಿಗಲ್ಲಾಯಿತು.
ವೃತ್ತಿ ಬದಲಾವಣೆ: ಬಿಕಾಂ ವಿದ್ಯಾಭ್ಯಾಸ ಪಡೆದು ಕಂಪನಿ ಸೆಕ್ರೆಟರಿ ಕೋರ್ಸ್ ಮಾಡಿದ ಸಮೀರಾಗೆ ಕಾರ್ಪೊರೇಟ್ ಕೆಲಸ ತನಗೆ ಸರಿ ಹೊಂದಲ್ಲ ಎಂದು ಬಲು ಬೇಗ ಅನಿಸಿತು. ಗಂಡ ಆದಿತ್ಯ ಮತ್ತು ಅತ್ತೆ-ಮಾವಂದಿರ ಉತ್ತೇಜನದಿಂದ ಸಂಗೀತದತ್ತ ದೃಷ್ಟಿ ನೆಟ್ಟರು. ಸಂಗೀತ ಸಂಯೋಜಕ ಥಮನ್ ಅವರಿಗೆ ಸಂಗೀತದಲ್ಲಿ ಹೊಸ ಅವಕಾಶ ನೀಡಲು ಮಾರ್ಗ ತೋರಿಸಿದರು. ಶಿವಂ ಚಿತ್ರದಲ್ಲಿ ಐ ಲವ್ ಯು ಹಾಡಿಗೆ ದನಿಯಾದ ಸಮೀರಾಗೆ ಹೆಸರು ತಂದು ಕೊಟ್ಟದ್ದು ಬ್ರೂಸ್ ಲೀಯ ಟೈಟಲ್ ಟ್ರಾಕ್. ನನ್ನ ಮೊದಲ ಹಾಡು ಬಿಡುಗಡೆಯಾದಾಗ ನಾನು ಎಷ್ಟು ಸಂತೋಷವಾಗಿದ್ದೆ ಎಂದು ಹೇಳಲು ಸಾಧ್ಯವಿಲ್ಲ. ಥಿಯೇಟರ್ನಲ್ಲಿ ನನ್ನ ಗಾಯನ ಆಲಿಸಿ ನನಗೆ ಅನಿಸಿದ್ದ ಹೆಮ್ಮೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಗಾಯಕಿ ಸಮೀರಾ.
ಅತ್ಯುತ್ತಮ ಪ್ರದರ್ಶಕಿ: ಸಮೀರಾ ತೆಲುಗು ಮತ್ತು ತಮಿಳಿನಲ್ಲಿ 50ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ಮೆಲೋಡಿ, ಹೈ ಎನರ್ಜಿ ಮಾಸ್, ಭಾವನಾತ್ಮಕ ಹಾಡು ಇವೆ. ತೆಲುಗಿನ 'ಡಿಕ್ಟೆಟರ್' ಚಿತ್ರದ 'ಗಣ ಗಣ' ಆಂಧ್ರ ತೆಲಂಗಾಣ, 'ಸರ್ರೈನೋಡು' ಚಿತ್ರದ 'ಅಬ್ಬಚ್ಚ ಅಬ್ಬಚ್ಚ' ಮತ್ತು 'ಅಮಿಗೊಸ್'ನ ಚಿತ್ರದ ಹಾಡು ಜನಪ್ರಿಯತೆ ನೀಡಿವೆ. ಗಾಯನದ ಜೊತೆಗೆ 'ಡಬಲ್ ಇಸ್ಮಾರ್ಟ್' ಚಿತ್ರದಲ್ಲಿ ಕಾವ್ಯ ತಪಾರ್, 'ಸತ್ಯಂ ಸುದರಂ'ನಲ್ಲಿ ದೇವದರ್ಶಿನಿ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೇ, ಡೆವಿಲ್ ಚಿತ್ರದ 'ದೊರಮೆ ಥೈರಮೈ' ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಗಂಭೀರತೆಯಲ್ಲಿ ಹಾಸ್ಯ: ತಮ್ಮ ತಮಾಷೆ ಸ್ವಭಾವದಿಂದ ಪರಿಚಿತರಾಗಿರುವ ಸಮೀರಾ, ಕೋವಿಡ್ 19 ಸಾಂಕ್ರಾಮಿಕತೆ ವೇಳೆ ತಮ್ಮಲ್ಲಿನ ಮಿಮಿಕ್ರಿ ಮತ್ತು ಹಾಸ್ಯಕ್ಕೆ ವೇದಿಕೆ ಒದಗಿಸಿಕೊಂಡರು. ಬದುಕು ಗಂಭೀರವಾಗುತ್ತಿದೆ ಎಂದಾಗ ಇನ್ಸ್ಟಾಗ್ರಾಂ ಮೂಲಕ ನೋಡುಗರಲ್ಲಿ ನಗೆ ಉಕ್ಕಿಸಿದರು. ಬಹುತೇಕ ಅವರ ರೀಲ್ಸ್ಗಳ ಮೂಲಕ ನೈಸರ್ಗಿಕವಾಗಿ ಜನರನ್ನು ತಮ್ಮ ವಿಷಯಗಳ ಮೂಲಕ ಸೆಳೆಯುತ್ತಾರೆ.
ಸಂಗೀತದಿಂದ ನಟನೆವರೆಗೆ ಸಮೀರಾ ಬಹುಮುಖ ಪ್ರತಿಭೆಯಾಗಿ ಬೆಳಗುತ್ತಿದ್ದಾರೆ. ನಾನು ಏನೇ ಮಾಡಿದರೂ, ಪ್ರತಿಯೊಬ್ಬರೂ ಮನಸ್ಸಿನಲ್ಲಿ ಸದಾ ಕಾಲ ನಾನಿರಬೇಕು ಎಂದು ಬಯಸುತ್ತೇನೆ ಎನ್ನುತ್ತಾರೆ ಸಮೀರಾ.
ಇದನ್ನೂ ಓದಿ: ಅತ್ಯದ್ಭುತ ನಿರ್ದೇಶನ ಮಾತ್ರವಲ್ಲ, ನೃತ್ಯಕ್ಕೂ ಸೈ ರಾಜಮೌಳಿ : ಜಕ್ಕಣ್ಣನ ಜಬರ್ದಸ್ತ್ ಡ್ಯಾನ್ಸ್ ನೋಡಿ