ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈನ ಮನೆ ಮೇಲಿನ ಗುಂಡಿನ ದಾಳಿ ಪ್ರಕರಣ ಕುರಿತು ಅವರ ತಂದೆ ಸಲೀಂ ಖಾನ್ ಮಾತನಾಡಿದ್ದು, ತಮ್ಮ ಮಗನಿಗೆ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ. ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ಸ್ಕ್ರೀನ್ ರೈಟರ್, ದಾಳಿ ನಡೆಸಿದವರನ್ನು ಅನಕ್ಷರಸ್ಥರು ಎಂದು ಕರೆದಿದ್ದಾರೆ. ಜೊತೆಗೆ ತಮ್ಮ ಕುಟುಂಬವು ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದಿಂದ ಹೆಚ್ಚುವರಿ ಪೊಲೀಸ್ ಭದ್ರತೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
'ಈ ಅನಕ್ಷರಸ್ಥರ ಬಗ್ಗೆ ಮಾತನಾಡುವುದರಲ್ಲಿ ಏನಿದೆ. ಅವರು ಯಾವಾಗ ಬುದ್ಧಿ ಕಲಿಯುತ್ತಾರೆ' ಎಂದು ಸಲೀಂ ಪ್ರಶ್ನಿಸಿದರು. ಅಲ್ಲದೇ, ಮತ್ತಷ್ಟು ಹೆಚ್ಚಿನ ಭದ್ರತೆ ನೀಡುವಂತೆ ಒತ್ತಾಯಿಸಿದ ಅವರು, ಮುಂಬೈ ಪೊಲೀಸರು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸುರಕ್ಷಿತವಾಗಿಡುವ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಅವರು ಬಂಧಿಸಿದ್ದು, ಖಂಡಿತ ಪೊಲೀಸರು ನಮಗೆ ರಕ್ಷಣೆ ಕೊಡುತ್ತಾರೆ ಎಂದರು.
ನಟ ಸಲ್ಮಾನ್ ಖಾನ್ ಅವರಿಗೆ ಅವರ ಶೆಡ್ಯೂಲ್ನಂತೆ ಕೆಲಸ ನಿರ್ವಹಿಸುವಂತೆ ಸಮಾಲೋಚನೆ ನಡೆಸಲಾಗಿದೆ. ಈ ಘಟನೆ ಕುರಿತು ಪೊಲೀಸರ ತನಿಖೆ ನಡೆಯುತ್ತಿರುವ ಹಿನ್ನೆಲೆ ಸಾರ್ವಜನಿಕವಾಗಿ ಮಾತನಾಡದಂತೆ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಗುಂಡಿನ ದಾಳಿ ನಡೆದು ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕವೇ ಸಲೀಂ ಖಾನ್ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ಕಳೆದ ಭಾನುವಾರ ಮುಂಬೈನ ಸಲ್ಮಾನ್ ಖಾನ್ ಮನೆ ಮೇಲೆ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ಇದಾದ ಬಳಿಕ ಅವರು, ಬೈಕ್ ಅನ್ನು ಅವರ ಮನೆ ಹತ್ತಿರದ ಚರ್ಚ್ನ ಸಮೀಪ ಬಿಟ್ಟು, ಆಟೋ ರಿಕ್ಷಾ ಹಿಡಿದು ಬಾಂದ್ರಾ ರೈಲ್ವೆ ಸ್ಟೇಷನ್ಗೆ ತೆರಳಿದ್ದರು. ಅಲ್ಲಿ ಮತ್ತೊಂದು ಆಟೋ ರಿಕ್ಷಾ ಹತ್ತಿ ಸಂತಕ್ರೂಜ್ ಸ್ಟೇಷನ್ಗೆ ಬಂದು ಅಲ್ಲಿ ಗುಜರಾತ್ನ ಕಚ್ಗೆ ಹೋಗುವ ರೈಲು ಹತ್ತಿದ್ದರು.
ಈ ಇಬ್ಬರು ಆರೋಪಿಗಳನ್ನು ಏಪ್ರಿಲ್ 16ರಂದು ಬಂಧಿಸಲಾಗಿದ್ದು, ಬಿಹಾರದ 24 ವರ್ಷದ ವಿಕ್ಕಿ ಸಹಬ್ ಗುಪ್ತಾ ಮತ್ತೊಬ್ಬ ಆರೋಪಿ ಶ್ರೀಜೋಗಿದ್ರಾ ಪಾಲ್ (21) ಎಂದು ಗುರುತಿಸಲಾಗಿದೆ. ಈ ಪ್ರಕರಣದ ಹೊಣೆಯನ್ನು ಅನ್ಮೋಲ್ ಬಿಷ್ಣೋಯಿ ಗ್ಯಾಂಗ್ ಹೊತ್ತಿದ್ದು, ಈ ಕೃತ್ಯಕ್ಕಾಗಿ ಬಾಡಿಗೆ ಮೇರೆಗೆ ಈ ಆರೋಪಿಗಳನ್ನು ಅವರು ನೇಮಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಅಧಿಕೃತ ಮೂಲಗಳ ಪ್ರಕಾರ, ಈ ಕೃತ್ಯಕ್ಕೆ ಬಳಕೆ ಮಾಡಲಾಗಿರುವ ಶಸ್ತ್ರಾಸ್ತ್ರವೂ ಲೋಕಲ್ ಹ್ಯಾಂಡ್ಗನ್ ಅಲ್ಲ. ಇದನ್ನು ನೀರಿಗೆ ಎಸೆಯಲಾಗಿದೆ ಎಂದು ತಿಳಿಸಿದ್ದಾರೆ.
1998ರ ಕೃಷ್ಣಮೃಗ ಬೇಟೆ ಪ್ರಕರಣದ ಬಳಿಕ ನಟ ಸಲ್ಮಾನ್ ಖಾನ್ ಬಿಷ್ಣೋಯಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏಕೆಂದರೆ ಈ ಸಮುದಾಯದ ಜನ ಕೃಷ್ಣ ಮೃಗವನ್ನು ದೈವರೂಪದಲ್ಲಿ ಕಾಣುತ್ತಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಮೇಲೆ ದಾಳಿ ಮಾಡಿದ್ದ ಆರೋಪಿಗಳು ಗುಜರಾತ್ನಲ್ಲಿ ಅಂದರ್