ಹೈದರಾಬಾದ್: ಭಾನುವಾರ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಲ್ಲಿ ಒಬ್ಬ ಗುರುಗ್ರಾಮದವನು ಎಂದು ಶಂಕಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸಲ್ಮಾನ್ ಖಾನ್ರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ 4:50 ರಿಂದ 5 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ತನಿಖೆಯಲ್ಲಿ ಸಿಸಿಟಿವಿ ಪರಿಶೀಲಿಸಿದ್ದು, ಒಬ್ಬ ಆರೋಪಿ ಹರಿಯಾಣ ರಾಜ್ಯದ ಗುರುಗ್ರಾಮಕ್ಕೆ ಸೇರಿದವನೆಂದು ಶಂಕಿಸಲಾಗಿದೆ.
ಬಾಂದ್ರಾ ಪೊಲೀಸ್ ಅಧಿಕಾರಿಯ ನೀಡಿರುವ ಮಾಹಿತಿ ಪ್ರಕಾರ, ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ)ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ 'ಅಪರಿಚಿತ ವ್ಯಕ್ತಿಗಳ' ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇಬ್ಬರಲ್ಲಿ ಒಬ್ಬರು ಹರಿಯಾಣದಲ್ಲಿ ಹಲವು ಕೊಲೆ ಮತ್ತು ದರೋಡೆಗಳಲ್ಲಿ ಭಾಗಿಯಾಗಿರುವ ಗುರುಗ್ರಾಮ್ನ ಕ್ರಿಮಿನಲ್ ಎಂದು ಶಂಕಿಸಲಾಗಿದೆ. ಅಲ್ಲದೇ ಮಾರ್ಚ್‌ನಲ್ಲಿ ನಡೆದ ಗುರುಗ್ರಾಮ ಮೂಲದ ಉದ್ಯಮಿ ಸಚಿನ್ ಮುಂಜಾಲ್ ಹತ್ಯೆಯಲ್ಲಿ ಬೇಕಾದ ಪ್ರಮುಖ ಆರೋಪಿ ಎಂದು ದೆಹಲಿ ಪೊಲೀಸರನ್ನು ಉಲ್ಲೇಖಿಸಿ ಅಧಿಕೃತ ಮೂಲಗಳು ತಿಳಿಸಿವೆ.
ವಿದೇಶದಲ್ಲಿ ನೆಲೆಸಿರುವ ಕ್ರಿಮಿನಲ್ ರೋಹಿತ್ ಗೋಡಾರಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಉದ್ಯಮಿ ಮುಂಜಾಲ್ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಈತ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಅವರ ಸಹೋದರ ಅನ್ಮೋಲ್ ಮತ್ತು ಗೋಲ್ಡಿ ಬ್ರಾರ್ ಅವರ ನಿಕಟ ಸಹಚರರಾಗಿದ್ದಾನೆ. ನಿನ್ನೆ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅನ್ಮೋಲ್ ಬಿಷ್ಣೋಯ್ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದು ಸಲ್ಮಾನ್ ಖಾನ್ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. 'ಇದು ಕೇವಲ ಟ್ರೇಲರ್' ಎಂದು ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ವರ್ಷ ಮಾರ್ಚ್‌ನಲ್ಲಿ, ನಟ ಸಲ್ಮಾನ್ರಿಗೆ ಬೆದರಿಕೆಯ ಇ - ಮೇಲ್ ಬಂದ ನಂತರ ಮುಂಬೈ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 120-ಬಿ , 506-II ಹಾಗೂ 34(ಸಾಮಾನ್ಯ ಉದ್ದೇಶ)ದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.