ಬೆಂಗಳೂರು: ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಹಾಸ್ಯ ನಟ ಚಿಕ್ಕಣ್ಣ, ಹೊರಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. "ರಾಜರಾಜೇಶ್ವರಿನಗರದಲ್ಲಿ ಇರುವ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟಾರೆಂಟ್‌ನಲ್ಲಿ ಊಟಕ್ಕೆ ಕರೆದಿದ್ದರು. ಆಗ ಅಲ್ಲಿಗೆ ಹೋಗಿದ್ದೆ. ಇದರ ಬಗ್ಗೆ ವಿಚಾರಣೆ ನಡೆಸುವ ಉದ್ದೇಶಕ್ಕೆ ಪೊಲೀಸರು ಕರೆಯಿಸಿಕೊಂಡಿದ್ದರು. ನಾನು ಸಂಪೂರ್ಣವಾಗಿ ಪೊಲೀಸರ ತನಿಖೆಗೆ ಸಹಕರಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ ಚಿಕ್ಕಣ್ಣ ಅಲ್ಲಿಂದ ಹೊರಟು ಹೋದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ನಟ ದರ್ಶನ್ ಅವರು ಆರ್.ಆರ್.ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟಾರೆಂಟ್‌ನಲ್ಲಿ ತಮ್ಮ ಸಹಚರರೊಂದಿಗೆ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರೂ ಭಾಗಿಯಾಗಿದ್ದರು ಎಂಬ ಮಾಹಿತಿ ಮೇರೆಗೆ, ಪೊಲೀಸರು ಅವರನ್ನೂ ಕರೆಸಿ ವಿಚಾರಣೆ ಮಾಡಿದ್ದಾರೆ.
ಪಾರ್ಟಿ ನಡೆಸಿದ್ದ ಮಾಹಿತಿ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಸ್ಟೋನಿ ಬ್ರೂಕ್ ಬಾರ್ ಆ್ಯಂಡ್ ರೆಸ್ಟಾರೆಂಟ್‌ನಲ್ಲಿ ದರ್ಶನ್ ಹಾಗೂ ಅವರ ಸಹಚರರನ್ನು ಕರೆಸಿ ಸ್ಥಳ ಮಹಜರು ನಡೆಸಿದರು. ನಟ ಚಿಕ್ಕಣ್ಣ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಂಡಿದ್ದರು. ವಿಚಾರಣೆಗೆ ಬಂದಿದ್ದ ನಟ ಚಿಕ್ಕಣ್ಣ ಅವರನ್ನು ನಟ ದರ್ಶನ್ ಜೊತೆಗೆ ಬಾರ್ ಆ್ಯಂಡ್ ರೆಸ್ಟಾರೆಂಟ್ಗೆ ಕರೆದುಕೊಂಡು ಹೋದ ಪೊಲೀಸರು ಸ್ಥಳ ಮಹಜರು ನಡೆಸಿದರು.
ಜೂನ್ 8 ರಂದು ದರ್ಶನ್, ಅವರ ಸಹಚರರಾದ ಪ್ರದೋಷ್, ವಿನಯ್, ಪವನ್ ಸೇರಿದಂತೆ ಕೆಲ ಆರೋಪಿಗಳು ಪಾರ್ಟಿ ಮಾಡಿದ್ದರು. ಇದೇ ಪಾರ್ಟಿಯಲ್ಲಿ ಆರ್.ಆರ್. ನಗರದ ನಿವಾಸಿಯಾಗಿರುವ ಚಿಕ್ಕಣ್ಣ ಅವರೂ ಭಾಗಿಯಾಗಿದ್ದರು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಕೊಲೆಗೂ ಮುನ್ನ ರೆಸ್ಟಾರೆಂಟ್‌ನಲ್ಲಿ ಪಾರ್ಟಿ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಜರು ಬಳಿಕ ನಟ ಚಿಕ್ಕಣ್ಣ ಹಾಗೂ ಆರೋಪಿಗಳಾದ ದರ್ಶನ್, ವಿನಯ್, ಪ್ರದೋಷ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತರಲಾಯಿತು. ಪೊಲೀಸರು ಚಿಕ್ಕಣ್ಣನನ್ನು ವಿಚಾರಣೆಗೊಳಪಡಿಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ಬಳಿಕ ಠಾಣೆಯಿಂದ ಹೊರಬಂದ ಚಿಕ್ಕಣ್ಣ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆದರೆ ವಿಚಾರಣೆಯಲ್ಲಿ ಏನು ನಡೆಯಿತು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು : ಕಿಚ್ಚ ಸುದೀಪ್ - ACTOR SUDEEP REACTION