ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಗಳುಳ್ಳ ಸಿನಿಮಾಗಳು ಮೂಡಿ ಬರುತ್ತಿವೆ. ಈ ಸಾಲಿನಲ್ಲಿ 'ರವಿಕೆ ಪ್ರಸಂಗ' ಕೂಡಾ ಒಂದು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಸ್ವೀಕರಿಸಿತ್ತು. ಇದೀಗ ಸಿನಿಮಾಗೆ ನಟ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ.
'ರವಿಕೆ ಪ್ರಸಂಗ' ಟ್ರೇಲರ್ ಅನಾವರಣ: ಹೌದು, ಪೋಸ್ಟರ್ ಹಾಗೂ ಟೈಟಲ್ನಿಂದಲೇ ಸದ್ದು ಮಾಡುತ್ತಿರೋ 'ರವಿಕೆ ಪ್ರಸಂಗ' ಚಿತ್ರದ ಟ್ರೇಲರ್ ಅನ್ನು ನಟರಾಕ್ಷಸ ಖ್ಯಾತಿಯ ಧನಂಜಯ್ ಅನಾವರಣಗೊಳಿಸಿದ್ದಾರೆ. ಟ್ರೇಲರ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಹುಬೇಡಿಕೆ ನಟ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಫೆ.16ಕ್ಕೆ ಸಿನಿಮಾ ಬಿಡುಗಡೆ: 'ರವಿಕೆ'ಯನ್ನೇ ಪ್ರಮುಖವಾಗಿ ಇಟ್ಟುಕೊಂಡು ಹಾಸ್ಯಭರಿತ ಸಿನಿಮಾ ಮಾಡಲಾಗಿದೆ. ಕೌಟುಂಬಿಕ ಕಥಾಹಂದರದಿಂದ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ 'ರವಿಕೆಪ್ರಸಂಗ' ಚಿತ್ರದ್ದು. ಬರುವ ತಿಂಗಳು ಫೆಬ್ರವರಿ 16 ರಂದು ಈ ಸಿನಿಮಾ ತೆರೆಕಾಣಲಿದೆ ಎಂದು ನಿರ್ದೇಶಕ ಸಂತೋಷ್ ಕೊಡೆಂಕೇರಿ ತಿಳಿಸಿದ್ದಾರೆ.
ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. 'ಝೇಂಕಾರ್ ಮ್ಯೂಸಿಕ್' ಚಿತ್ರದ ಆಡಿಯೋ ರೈಟ್ಸ್ ಪಡೆದಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ, ಸಂಭಾಷಣೆ ಬರೆದಿದ್ದಾರೆ.
- " class="align-text-top noRightClick twitterSection" data="">
ರವಿಕೆ ರಗಳೆಯ ಕಾಮಿಡಿ ಕಥೆ... ಸೀರೆ ಅಂದ್ರೆ ಹೆಣ್ಣುಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರು ರೂಪಾಯಿ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಇರಬೇಕು, ಬ್ಲೌಸ್ ಹೀಗೆ ಇರಬೇಕು ಅನ್ನೋ ಆಸೆಯಿಂದ ಒಳ್ಳೆ ಟೈಲರ್ ಬಳಿ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರೋದಿಲ್ಲ. ಇಂಥದ್ದೇ ಸರಿಹೊಂದದ ರವಿಕೆ ರಗಳೆಯ ಕಾಮಿಡಿ ಕಥೆ ಈ 'ರವಿಕೆ ಪ್ರಸಂಗ' ಸಿನಿಮಾ. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ಹೇಳಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ತಲುಪಿದ ಕಂಗನಾ ರಣಾವತ್: 'ಪುಣ್ಯವಿದ್ದವರಿಗೆ ಶ್ರೀರಾಮನ ದರ್ಶನ ಸಾಧ್ಯ'ವೆಂದ ನಟಿ
ಮಂಗಳೂರು ಕನ್ನಡವನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಅಡಿ ಈ ಚಿತ್ರ ನಿರ್ಮಾಣವಾಗಿದೆ. ಸದ್ಯ ಟ್ರೇಲರ್ನಿಂದ ಸದ್ದು ಮಾಡುತ್ತಿರೋ ಸಂತೋಷ್ ಕೊಡೆಂಕೆರಿ ನಿರ್ದೇಶನದ 'ರವಿಕೆಪ್ರಸಂಗ' ಫೆಬ್ರವರಿ 16ರಂದು ಚಿತ್ರಮಂದಿರ ಪ್ರವೇಶಿಸಲಿದೆ.
ಇದನ್ನೂ ಓದಿ: 'ಫೈಟರ್' ಸಿಕ್ಸ್ಪ್ಯಾಕ್ಗಾಗಿ ಪರಿಶ್ರಮ: 14 ತಿಂಗಳ ಬಳಿಕ ಸಿಹಿ ಸವಿದ ಹೃತಿಕ್ ರೋಷನ್