ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮೇಲೆ ಹಲ್ಲೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಇತ್ತೀಚೆಗೆ ಅರೆಸ್ಟ್ ಆಗಿದ್ದು, ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಆಘಾತವಾಗಿದೆ. 'ಸೆಲೆಬ್ರಿಟಿಗಳ ಆರಾಧನೆ'ಯ ಕರಾಳ ಅಂಶಗಳನ್ನು ಮುನ್ನೆಲೆಗೆ ತಂದಿರುವ ಈ ಪ್ರಕರಣ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿದೆ.
ಗುರುವಾರ ನಿರ್ದೇಶಕರು ಈ ಪ್ರಕರಣದ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದರ್ಶನ್ ಹೆಸರು ಉಲ್ಲೇಖವಾಗದಿದ್ದರೂ ಇದು ಅವರಿಗೇನೆ ಹಾಕಿರೋ ಪೋಸ್ಟ್ ಎಂದು ಬಹುತೇಕ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. 'ಸ್ಟಾರ್ ವರ್ಶಿಪ್ ಸಿಂಡ್ರೋಮ್' (ಅತಿಯಾದ ಅಭಿಮಾನ)ನ ವಿಚಿತ್ರ ಸ್ವರೂಪ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ಸ್ಟಾರ್ ಬಗ್ಗೆ ಎಷ್ಟು ಗೀಳನ್ನು ಹೊಂದುತ್ತಾರೆ ಎಂಬುದಕ್ಕೆ ಈ ಘಟನೆಯೇ ಒಂದು ಪ್ರಮುಖ ಉದಾಹರಣೆ. ಎಷ್ಟರ ಮಟ್ಟಿಗೆಂದರೆ, ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನವನ್ನು ಹೇಗೆ ನಡೆಸಬೇಕೆಂದು ನಿರ್ದೇಶಿಸಲು ಪ್ರಾರಂಭಿಸಿ ಬಿಡುತ್ತಾರೆ. ಸೆಲೆಬ್ರಿಟಿಗಳ ಮೇಲಿನ ಅಭಿಮಾನಿಗಳ ಭಕ್ತಿಯ ಪರಿಣಾಮವಿದು (ತಪ್ಪಿಸಿಕೊಳ್ಳಲಾಗದಂತಹ) ಎಂದು ರಾಮ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಜಿವಿ ಟ್ವೀಟ್ನಲ್ಲೇನಿದೆ? "ತಾರೆಯೋರ್ವರು ತಮ್ಮ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುವ ಕಟ್ಟಾ ಅಭಿಮಾನಿಯನ್ನು ಕೊಲ್ಲಲು ಮತ್ತೊಬ್ಬ ಕಟ್ಟಾ ಅಭಿಮಾನಿಯನ್ನು ಬಳಸುತ್ತಾರೆ. ಇದು ಸ್ಟಾರ್ ಆರಾಧನೆಯ ವಿಲಕ್ಷಣತೆಗೆ ಉತ್ತಮ ಉದಾಹರಣೆಯಾಗಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರು ತಮ್ಮ ಜೀವನವನ್ನು ಹೇಗೆ ನಡೆಸಬೇಕೆಂದು ಆದೇಶಿಸಲು ಬಯಸುತ್ತಾರೆ. ಇದುವೇ 'ಸ್ಟಾರ್ ವರ್ಶಿಪ್ ಸಿಂಡ್ರೋಮ್'ನ ಸೈಡ್ ಎಫೆಕ್ಟ್'' ಎಂದು ಬರೆದು ಕೊಂಡಿದ್ದಾರೆ.
ಮತ್ತೊಂದು ಟ್ವೀಟ್: ''ನಿರ್ದೇಶಕರು ಚಿತ್ರಕಥೆಯನ್ನು ಅಂತಿಮಗೊಳಿಸಿದ ನಂತರವೇ ಚಿತ್ರೀಕರಣವನ್ನು ಪ್ರಾರಂಭಿಸಬೇಕು. ಆದರೆ ಹಲವು ಬಾರಿ, ಚಿತ್ರೀಕರಣ ನಡೆಯುವ ವೇಳೆ ಬರೆಯುತ್ತಾರೆ. ಆದರೆ ದರ್ಶನ್ ಅವರಿಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ, ಸಿನಿಮಾ ಬಿಡುಗಡೆಯಾದ ನಂತರ ಚಿತ್ರಕಥೆ ಬರೆಯಲು ಪ್ರಾರಂಭವಾಯಿತು'' ಎಂದು ಮಾರ್ಮಿಕವಾಗಿ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದಾರೆ.
ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ, ದರ್ಶನ್ ಮತ್ತು ಪವಿತ್ರಾ ಸೇರಿ 13 ಮಂದಿ ಅರೆಸ್ಟ್ ಆಗಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ, ಕೊಲೆಗೈದು ಮೃತದೇಹವನ್ನು ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಎಸೆದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪೊಲೀಸರು ದರ್ಶನ್ ಗುಂಪನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ಬಂಧನ: ಅನ್ನಪೂರ್ಣೇಶ್ವರಿ ನಗರ ಠಾಣೆಯ ಗೇಟ್ ಮುಂದೆ ಶಾಮಿಯಾನ, ನಿಷೇಧಾಜ್ಞೆ - Section 144 enforced