ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಉಪೇಂದ್ರ ಸಾರಥ್ಯದ 'ಯು ಐ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಲ್ಲೇ ರಿಯಲ್ ಸ್ಟಾರ್ ನಟನೆಯ ಮತ್ತೊಂದು ಚಿತ್ರ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದ ಟೈಟಲ್ "ರಕ್ತ ಕಾಶ್ಮೀರ". 16 ವರ್ಷಗಳ ಹಿಂದೆಯೇ ಚಿತ್ರೀಕರಣ ನಡೆದಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ.
ಅದೆಷ್ಟೋ ಸಿನಿಮಾಗಳು ತನ್ನ ಚಿತ್ರೀಕರಣ ಪೂರ್ಣಗೊಳಿಸಿ ರಿಲೀಸ್ ಆಗದೇ ಉಳಿದಿರುವ ಕೆಲ ಉದಾಹರಣೆಗಳು ಸ್ಯಾಂಡಲ್ವುಡ್ನಲ್ಲಿದೆ. ಅದರಂತೆ, 16 ವರ್ಷಗಳ ಹಿಂದೆಯೇ ಶೂಟಿಂಗ್ ಪೂರ್ಣಗೊಳಿಸಿಕೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಚಂದನವನದ ಮೋಹಕ ತಾರೆ ರಮ್ಯಾ ಅಭಿನಯದ "ರಕ್ತ ಕಾಶ್ಮೀರ" ಬಿಡುಗಡೆಗೆ ಸಜ್ಜಾಗಿದೆ. 2025ರ ಆರಂಭದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.
ಚಿತ್ರದ ಕಥೆಯೇನು? ಎಮ್ಡಿಎಮ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಹಿರಿಯ ಮತ್ತು ಜನಪ್ರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದರು. ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಶೀರ್ಷಿಕೆಯೇ ತಿಳಿಸುವಂತೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.
ಪ್ರಧಾನಿ ಮೋದಿ ಹೇಳಿಕೆ ಬಳಕೆ: ಉಗ್ರಗಾಮಿಗಳು ಕಾಶ್ಮೀರದಲ್ಲಷ್ಟೇ ಅಲ್ಲ, ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಅಮಾಯಕರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಹಾಗೂ ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಸನ್ನಿವೇಶವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಜೊತೆಗೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ 'ಯುಐ' ರಿಲೀಸ್: ಉಪ್ಪಿ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ ಬಹುನಿರೀಕ್ಷಿತ ಚಿತ್ರದ ವಿಶೇಷತೆಗಳು
ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರೇ "ರಕ್ತ ಕಾಶ್ಮೀರ" ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ಎಂ.ಎಸ್ ರಮೇಶ್ ಅವರದ್ದು. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ (ತೆಲುಗು ನಟಿ), ಕುರಿ ಪ್ರತಾಪ್ ಸೇರಿದಂತೆ ಮೊದಲಾದವರಿದ್ದಾರೆ.
ಇದನ್ನೂ ಓದಿ: 'ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಜ.26ರಂದು ಸಿಗೋಣ': ಶಿವರಾಜ್ಕುಮಾರ್
ಈ "ರಕ್ತ ಕಾಶ್ಮೀರ" ಸಿನಿಮಾ ಚಿತ್ರೀಕರಣ ಮುಗಿಸಿ ರಿಲೀಸ್ ಆಗಬೇಕನ್ನೋ ಹೊತ್ತಲ್ಲಿ ನಿರ್ಮಾಪಕರ ಹಣಕಾಸಿನ ವಿಷಯದಿಂದ ಅಲ್ಲಿಗೇ ಸ್ಥಗಿತಗೊಂಡಿತ್ತು. ಬರೋಬ್ಬರಿ, 16 ವರ್ಷ ತೆರೆಕಾಣದೇ ಉಳಿಯುವ ಹಾಗೇ ಆಗಿತ್ತು. ಸದ್ಯ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಚಿತ್ರ ಹೊಸ ವರ್ಷಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಆರಂಭ ಆದ ಹೊತ್ತಲ್ಲಿ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಎಂಬ ಟೈಟಲ್ ಇಡಲಾಗಿತ್ತು. ಅದ್ಯ ಹಳೇ ಟೈಟಲ್ ಬಿಟ್ಟು, 'ರಕ್ತ ಕಾಶ್ಮೀರ' ಎಂಬ ಹೊಸ ಶೀರ್ಷಿಕೆ ಇಡಲಾಗಿದ್ದು, ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ.