'ಬಿಗ್ ಬಾಸ್ ಕನ್ನಡ ಸೀಸನ್ 11' 50 ದಿನಗಳನ್ನು ಪೂರೈಸಿದ ಹೊತ್ತಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ ಅತಿ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡರು. ಆದ್ರೆ ಅವರ ಮಾತುಗಳು ಕೆಲವೊಮ್ಮೆ ಲೆಕ್ಕಕ್ಕಿಂತ ಹೆಚ್ಚಾಗುತ್ತವೆ, ಇದು ಅತಿಯಾಯಿತೆನ್ನುವ ಅಭಿಪ್ರಾಯಗಳೂ ಇವೆ. ಇಂದಿನ ಸಂಚಿಕೆಯಲ್ಲೂ ಅವರ ಮಾತಿನ ಮಳೆ ಇರುವ ಸುಳಿವನ್ನು ಬಿಗ್ ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ನೀಡಿದೆ.
'ನಾಮಿನೇಷನ್ಗೆ ಡೋಂಟ್ ಕೇರ್ ಅಂದ್ರಾ ರಜತ್ ಕಿಶನ್?' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ರಿಲೀಸ್ ಆಗಿರುವ ಪ್ರೋಮೋದಲ್ಲಿ ರಜತ್ ಕಿಶನ್ ಮಾತಿನ ಅಬ್ಬರ ಕಾಣಬಹುದು. ನಾನೇ ಹೀರೋ, ನಾನ್ ಇರೋದೇ ಹೀಗೆ, ನಾನ್ ಖರಾಬು ಎಂಬಂತಹ ಮಾತುಗಳು ಸ್ವತಃ ಅವರ ಬಾಯಿಂದಲೇ ಬಂದಿವೆ. ವೀಕೆಂಡ್ ಎಪಿಸೋಡ್ನಲ್ಲಿ ಮಾತಿನ ಮೇಲೆ ನಿಗಾ ಇರಲಿ ರಜತ್ ಎಂದು ಸುದೀಪ್ ಕಿವಿಮಾತು ಹೇಳಿದ್ದರು. ಆದ್ರೆ ರಜತ್ ಅಬ್ಬರ ಮುಂದುವರಿದಿದೆ. ಅವು ಇತರೆ ಸ್ಪರ್ಧಿಗಳನ್ನೂ ಕೆಳಗೆ ಹಾಕಿದಂತೆ ತೋರುತ್ತಿವೆ.
ಎಲಿಮಿನೇಷನ್ಗೆ ಮಾಡುವ ನಾಮಿನೇಷನ್ನನ್ನು ಆಧಾರವಾಗಿಟ್ಟುಕೊಂಡು ಬಿಗ್ ಬಾಸ್ ಟಾಸ್ಕ್ಗಳನ್ನು ಕೊಡುತ್ತಿದ್ದಾರೆ. ಗೆದ್ದ ತಂಡ ಸೋತ ತಂಡದವರಲ್ಲಿ ಓರ್ವರನ್ನು ನಾಮಿನೇಟ್ ಮಾಡುವ ಅವಕಾಶ ಪಡೆಯುತ್ತಿದ್ದಾರೆ. ಅದರಂತೆ, ಇಂದಿನ ಸಂಚಿಕೆಯಲ್ಲಿ ರಜತ್‌ರನ್ನು ನಾಮಿನೇಟ್ ಮಾಡಿದ ಹಿನ್ನೆಲೆಯಲ್ಲಿ ಕೆರಳಿದ ವೈಲ್ಡ್ ಕಾರ್ಡ್ ಸ್ಪರ್ಧಿ ನಾನು ಖರಾಬು ಎಂದು ಹೇಳಿದ್ದಾರೆ.
ತಮ್ಮ ಹಗ್ಗದಲ್ಲಿದ್ದ ಬಣ್ಣದ ಕ್ರಮದ ಅನುಸಾರ ಕೋಲುಗಳನ್ನು ತಮ್ಮ ಮೇಜಿನಲ್ಲಿ ಸಿಕ್ಕಿಸಬೇಕು ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿದ್ದಾರೆ. ಆಟದಲ್ಲಿ ಕರುನಾಡ ಕಿಲಾಡಿಗಳು ಅಂದರೆ ತ್ರಿವಿಕ್ರಮ್ ಅವರ ತಂಡ ಗೆದ್ದಿದೆ. ತಮ್ಮೊಳಗೆ ಚರ್ಚಿಸಿ, ಸೋತ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕೆಂದು ಗೆದ್ದ ತಂಡಕ್ಕೆ ಬಿಗ್ ಬಾಸ್ ತಿಳಿಸಿದ್ದಾರೆ. ಗೌತಮಿ ಮತ್ತು ಚೈತ್ರಾ ರಜತ್ ಹೆಸರನ್ನು ಸೂಚಿಸಿದಂತೆ ತೋರಿದೆ. ತ್ರಿವಿಕ್ರಮ್ ಅವರ ತಂಡ ಚರ್ಚಿಸಿ ಅಂತಿಮವಾಗಿ ರಜತ್ ಹೆಸರನ್ನು ಎಲಿಮಿನೇಷನ್ಗೆ ನಾಮಿನೇಷನ್ ಮಾಡಿದೆ.
ಇದನ್ನೂ ಓದಿ: ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನಕ್ಕೆ ಹೊಸ ಸಿನಿಮಾ ಅನೌನ್ಸ್: ತೆಲುಗು ಪ್ರೊಡಕ್ಷನ್ ಹೌಸ್ ಜೊತೆ ಕೈಜೋಡಿಸಿದ ತಾರೆ
ಇಲ್ಲಿ ಎಲ್ಲರಿಗೂ ಇಂಡಿವಿಶ್ಯುವಲ್ ಆಗಿ ಆಡಿ ಎಂದು ಪ್ರವೋಕ್ ಮಾಡ್ತಿದ್ದಾರೆ. ಅವ್ರು ಅವ್ರನ್ನ ಸುಪೀರಿಯರ್ ಅಂದುಕೊಂಡಿದ್ದಾರೆ ಎಂದು ತ್ರಿವಿಕ್ರಮ್ ತಮ್ಮ ತಂಡದ ಪರವಾಗಿ ಕಾರಣಗಳನ್ನು ಒದಗಿಸಿದ್ದಾರೆ. ನಂತರ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ರಜತ್ ಕಿಶನ್, ಇಂಡಿವಿಶ್ಯುವಲ್ ಆಗಿ ಆಡಿ, ಯಾಕೆ ತಾಕತ್ ಇಲ್ವಾ?. ನಾನ್ ಸುಪೀರಿಯರೇ, ನಾನ್ ಖರಾಬೇ, ನಾನ್ ಮಸ್ತೇ. ಹೌದು. ನಾಮಿನೇಷನ್ ಮಾಡಿದ್ರೆ ಬದಲಾಗ್ಬಿಡ್ತೀನಾ ನಾನು. ನಾಳೆಯಿಂದ ಬೇರೆಯವ್ರನ್ನ ಹೀರೋ ಅಂತೀನಾ? ನಾನೇ ಹೀರೋ ಎಂದಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸ್ಪರ್ಧಿಗಳನ್ನು ತಿದ್ದಿ ತೀಡುವ ಕೆಲಸವನ್ನು ಸುದೀಪ್ ಮಾಡ್ತಾರೆ. ಕಳೆದ ವಾರ ರಜತ್ ಮತ್ತು ಧನರಾಜ್ ಗಲಾಟೆ ನಡೆದಿತ್ತು. ಈ ಬಗ್ಗೆ ಪ್ರಸ್ತಾಪಿಸಿ, ಮಾತಿನ ಮೇಲೆ ನಿಗಾ ಇರಲಿ, ನಿಮ್ಮ ನುಡಿ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಬುದ್ಧಿವಾದ ಹೇಳಿದ್ದರು. ರಜತ್ ಅವರ ಮೊದಲ ವಾರದಲ್ಲೂ ಸುರೇಶ್ ಜೊತೆಗಿನ ಜಗಳದ ಬಗ್ಗೆ ಪ್ರಸ್ತಾಪಿಸಿ, ಕನ್ನಡದಲ್ಲಿ ಮಾತನಾಡಲು ಒಳ್ಳೊಳ್ಳೆ ಪದಗಳಿವೆ ಎಂಬಂತೆ ಸುದೀಪ್ ತಿಳಿಸಿದ್ದರು. ಆದ್ರೀಗ ರಜತ್ ಅವರ ವರ್ತನೆ ತಾನು ಮಾತ್ರ ಹೀರೋ ಉಳಿದವರು ಝೀರೋ ಎಂಬಂತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.