ಸಿನಿಮಾ ಕ್ಷೇತ್ರಕ್ಕೆ ಗಾಡ್ ಫಾದರ್ ಇಲ್ಲದೇ ಬಂದು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿರುವ ನಿರ್ದೇಶಕ ಆರ್.ಚಂದ್ರು. ತಾಜ್ ಮಹಲ್, ಮೈಲಾರಿ, ಚಾರ್ ಮಿನಾರ್, ಐ ಲವ್ ಯೂ ಹಾಗೂ ಇತ್ತೀಚಿನ ಪ್ಯಾನ್ ಇಂಡಿಯಾ ಚಿತ್ರ 'ಕಬ್ಜ'ದಂಥ ಹಿಟ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರೀಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಕಬ್ಜ ಸಕ್ಸಸ್ ಬಳಿಕ ಆರ್.ಚಂದ್ರು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಆರ್.ಚಂದ್ರು ''ಆರ್.ಸಿ.ಸ್ಟುಡಿಯೋಸ್'' ಎಂಬ ಹೊಸ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಆರ್.ಸಿ.ಸ್ಟುಡಿಯೋಸ್ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿದ್ದಾರೆ. ಇದೇ ಸಂದಪ್ಭದಲ್ಲಿ ಚಂದ್ರು, ಆರ್.ಸಿ.ಪ್ರೊಡಕ್ಷನ್ ಅಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ.
5 ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ: ಆರ್.ಚಂದ್ರು ಆರ್.ಸಿ.ಸ್ಟುಡಿಯೋಸ್ ಅಡಿ ಶ್ರೀರಾಮಬಾಣ, ಫಾದರ್, ಪೋಕ್ (Pok), ಡಾಗ್ ಹಾಗೂ ಕಬ್ಜ 2 ಸಿನಿಮಾಗಳ ಟೈಟಲ್ ಅನಾವರಣ ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಇವರೊಂದಿಗೆ ಮೂರು ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ನಟ ಉಪೇಂದ್ರ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಾನು 35 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಇಲ್ಲಿಯವರೆಗೂ ಯಾರೂ ಕೂಡ ಒಟ್ಟಿಗೆ ಐದು ಸಿನಿಮಾಗಳನ್ನು ಅನೌನ್ಸ್ ಮಾಡಿರಲಿಲ್ಲ. ಚಂದ್ರು ಐದು ಸಿನಿಮಾಗಳನ್ನು ಒಟ್ಟಿಗೆ ಮಾಡುತ್ತಿರುವುದು ಅವರಲ್ಲಿರುವ ಹೃದಯ ಶ್ರೀಮಂತಿಕೆಯನ್ನು ತೋರಿಸಿದೆ. ನೆಗೆಟಿವ್ ಮಾತನಾಡುವವರೇ ಹೆಚ್ಚು. ಆದರೆ ಯಾವಾಗಲೂ ಪಾಸಿಟಿವ್ ಆಗಿ ಎಲ್ಲವನ್ನೂ ಸಹಿಸಿಕೊಂಡು ಸಿನಿಮಾ ಮಾಡುವ ತಾಳ್ಮೆ ಇರುವುದು ಚಂದ್ರು ಅವರಿಗೆ ಮಾತ್ರ" ಎಂದು ಕೊಂಡಾಡಿದರು.
ಆರ್.ಚಂದ್ರು ಮಾತನಾಡಿ, "ನಾನು ಕಳೆದ ಹತ್ತು ತಿಂಗಳಿಂದ ಈ ಐದು ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ಸದಾ ಪಾಸಿಟಿವ್ ಆಗಿ ಯೋಚನೆ ಮಾಡುತ್ತೇನೆ. ನನ್ನ ಬಗ್ಗೆ ನೆಗೆಟಿವ್ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಬ್ಜದಿಂದ 20 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದೇನೆ. ಸಕ್ಸಸ್, ಫೈಲ್ಯೂರ್ ಆಮೇಲೆ. ಮೊದಲು ಒಳ್ಳೆಯ ಸಿನಿಮಾ ಮಾಡಬೇಕು ಅಂತಾ ಅಂದುಕೊಂಡವನು. ಅದೇ ರೀತಿ ಆರ್.ಸಿ.ಸ್ಟುಡಿಯೋಸ್ ದೊಡ್ಡ ಮಟ್ಟಕ್ಕೆ ಬೆಳಯಬೇಕು ಅನ್ನೋದು ನನ್ನ ಆಸೆ" ಎಂದರು.
ಇದನ್ನೂ ಓದಿ: ಧ್ರುವ ಸರ್ಜಾರ 'ಕೆ.ಡಿ' ಅಡ್ಡಕ್ಕೆ ಬಳುಕುವ ಬಳ್ಳಿ ನೋರಾ ಫತೇಹಿ ಎಂಟ್ರಿ
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಎಂಬ ಹಳ್ಳಿಯಿಂದ ಬಂದ ಚಂದ್ರು ಡಾ.ರಾಜ್ಕುಮಾರ್ ಸಿನಿಮಾಗಳನ್ನು ನೋಡಿ ಪ್ರೇರಿತರಾದವರು. ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಪಣ ತೊಟ್ಟಿದ್ದ ಇವರು ಅಂದುಕೊಂಡಂತೆ ಇಂದು ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆ: ದೇಶಾದ್ಯಂತ ಪ್ರಜ್ವಲಿಸಿದ 'ರಾಮಜ್ಯೋತಿ' - ಫೋಟೋಗಳಿಲ್ಲಿವೆ
ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ಗೀತಾ ಶಿವ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಆಲ್ ದಿ ಬೆಸ್ಟ್ ಹೇಳುವ ಮೂಲಕ ಚಂದ್ರುಗೆ ಸಾಥ್ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಹಾಗು ವಿತರಕ ಆನಂದ್ ಪಂಡಿತ್, ನಿರ್ಮಾಪಕ ಅಲಂಕಾರ್ ಪಾಂಡಿಯನ್, ನಟ ಡಾರ್ಲಿಂಗ್ ಕೃಷ್ಣ ಪಾಲ್ಗೊಂಡಿದ್ದರು.