ಯಾವುದೇ ಒಂದು ಸೀಕ್ವೆಲ್ ತನ್ನ ಮೊದಲ ಭಾಗದ ಯಶಸ್ಸನ್ನು ಆಧರಿಸಿ, ಅದಕ್ಕಿಂತ ದುಪ್ಪಟ್ಟು ಮನರಂಜನೆ ನೀಡಲು ಬರುತ್ತದೆ ಅನ್ನೋದ್ರಲ್ಲಿ ಯಾವುದೇ ಸಂಶಯವಿರೋದಿಲ್ಲ. ಅದರಂತೆ ಇತ್ತೀಚೆಗೆ ತೆರೆಗೆ ಬಂದ 'ಪುಷ್ಪ 2: ದಿ ರೂಲ್' ಅಭೂತಪೂರ್ವ ಯಶಸ್ಸು ಕಂಡಿದೆ. ಭಾರೀ ನಿರೀಕ್ಷೆಗಳೊಂದಿಗೆ ಡಿಸೆಂಬರ್ 5, ಗುರುವಾರದಂದು ಚಿತ್ರಮಂದಿರ ಪ್ರವೇಶಿಸಿದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಈ ಬಿಗ್ ಪ್ರಾಜೆಕ್ಟ್ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಿದೆ. ಮೊದಲ ದಿನವೇ ಪ್ರಮುಖ ಮೈಲಿಗಲ್ಲು ಸೃಷ್ಟಿಸಿ, ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿರುವ ಸುಕುಮಾರ್ ನಿರ್ದೇಶನದ ಈ ಚಿತ್ರ ಬಹುತೇಕ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇನ್ನೇನು ಸಾವಿರ ಕೋಟಿ ದಾಟುವುದೊಂದೇ ಬಾಕಿ.
ಚಲನಚಿತ್ರವೊಂದರ ಯಶಸ್ಸು ಕೇವಲ ಮೊದಲ ದಿನಗಳಲ್ಲಿ ಮಾತ್ರವಲ್ಲ, ವಾರಾಂತ್ಯ ಮತ್ತು ನಂತರದ ಕೆಲ ದಿನಗಳವರೆಗೂ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದರ ಮೇಲೆ ಅವಲಂಭಿತವಾಗಿದೆ. ಪುಷ್ಪ 2 ಈಗಾಗಲೇ ಪ್ರಪಂಚದಾದ್ಯಂತ ಭಾರೀ ಸದ್ದು ಮಾಡಿದ್ದು, ಕಲೆಕ್ಷನ್ ಅತ್ಯುತ್ತಮವಾಗಿದೆ. ಮೊದಲ ಸೋಮವಾರ ಅಂದರೆ ಐದನೇ ದಿನದಂದು ಸಿನಿಮಾ ಹೇಗೆ ಪ್ರದರ್ಶನಗೊಂಡಿದೆ ಎಂಬುದನ್ನು ನೋಡೋಣ ಬನ್ನಿ
5ನೇ ದಿನದವರೆಗಿನ ಪುಷ್ಪ 2 ಕಲೆಕ್ಷನ್ ಅತ್ಯುತ್ತಮವಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಪುಷ್ಪ ಸೀಕ್ವೆಲ್ ಭಾರತದಲ್ಲಿ ಐದನೇ ದಿನ 64.1 ಕೋಟಿ ರೂಪಾಯಿ (ನೆಟ್ ಕಲೆಕ್ಷನ್) ಕಲೆಕ್ಷನ್ ಮಾಡಿದೆ. ಅಚ್ಚರಿ ಎಂಬಂತೆ ದಕ್ಷಿಣದ ಸಿನಿಮಾಗೆ ಹಿಂದಿ ಮಾರುಕಟ್ಟೆಯಿಂದಲೇ 46 ಕೋಟಿ ರೂ. ಬಂದಿದೆ. ತೆಲುಗು ಆವೃತ್ತಿಯಿಂದ 14 ಕೋಟಿ ರೂಪಾಯಿ ಬಂದರೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಂದ ಕ್ರಮವಾಗಿ 3 ಕೋಟಿ, 0.5 ಕೋಟಿ ಮತ್ತು 0.6 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಭಾರತದಲ್ಲಿ 593 ಕೋಟಿ ರೂ. ಕಲೆಕ್ಷನ್: ಆದ್ರೆ 4ನೇ ದಿನದ ಕಲೆಕ್ಷನ್ ಅನ್ನು ಹೋಲಿಸಿದರೆ ಐದನೇ ದಿನ ಶೇ.54.56%ರಷ್ಟು ಕುಸಿತ ಕಂಡಿದೆ. ಈ ಇಳಿಕೆಯ ಹೊರತಾಗಿಯೂ, ಪುಷ್ಪ 2 ಬಾಕ್ಸ್ ಆಫೀಸ್ನಲ್ಲಿ ಓಟ ಮುಂದುವರಿಸಿದೆ. ಭಾರತದಲ್ಲಿ ಮೊದಲ 5 ದಿನಗಳ ಒಟ್ಟಾರೆ ಕಲೆಕ್ಷನ್ 593 ಕೋಟಿ ರೂ. ದಾಟಿದೆ.
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಬಿಡುಗಡೆಗೂ ಮುನ್ನ | 10.65 ಕೋಟಿ ರೂ. (ಪ್ರೀಮಿಯರ್ ಶೋಗಳು). |
ದಿನ 1 | 164.25 ಕೋಟಿ ರೂಪಾಯಿ. |
ದಿನ 2 | 93.8 ಕೋಟಿ ರೂಪಾಯಿ. |
ದಿನ 3 | 119.25 ಕೋಟಿ ರೂಪಾಯಿ. |
ದಿನ 4 | 141.5 ಕೋಟಿ ರೂಪಾಯಿ. |
ದಿನ 5 | 61.1 ಕೋಟಿ ರೂ. (ಆರಂಭಿಕ ಅಂದಾಜು) |
ಒಟ್ಟು | 593.1 ಕೋಟಿ ರೂಪಾಯಿ. |
(ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶದ ಮೂಲ: ಸ್ಯಾಕ್ನಿಲ್ಕ್)
ಇದನ್ನೂ ಓದಿ: ಪತ್ನಿ ಗೀತಾ ಸಮೇತ ತಿರುಪತಿಗೆ ಮುಡಿ ಕೊಟ್ಟ ನಟ ಶಿವರಾಜ್ ಕುಮಾರ್
ವಿಶ್ವಾದ್ಯಂತ 880 ಕೋಟಿ ರೂ. ಕಲೆಕ್ಷನ್: ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಈ ಚಿತ್ರ 5ನೇ ದಿನಕ್ಕೆ ವಿಶ್ವಾದ್ಯಂತ 880 ಕೋಟಿ ರೂ.ಗಳನ್ನು ಗಳಿಸಿದ್ದು, ಈ ಅಂಕಿ ಅಂಶ ಏರುತ್ತಿದೆ. ಪುಷ್ಪ 2 ಜಾಗತಿಕವಾಗಿ ಬಹುಬೇಗನೇ 800 ಕೋಟಿ ರೂಪಾಯಿಗಳ ಗಡಿ ದಾಟಿದ ಭಾರತೀಯ ಚಿತ್ರ ಎಂಬ ದಾಖಲೆಯನ್ನು ಹೊಂದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇಂದು 900 ಕೋಟಿ ದಾಟುವ ಸಾಧ್ಯತೆಗಳು ಹೆಚ್ಚಿವೆ. ಬೆರಳೆಣಿಕೆ ದಿನಗಳಲ್ಲಿ ಸಿನಿಮಾ 100 ಕೋಟಿ ರೂ. ದಾಟುವ ವಿಶ್ವಾಸ ಅಪಅರ ಸಂಖ್ಯೆಯ ಅಭಿಮಾನಿಗಳದ್ದು.
ಇದನ್ನೂ ಓದಿ: ತಾಯಿ ಲೀಲಾವತಿಗೆ ಪುತ್ರನಿಂದ ದೇಗುಲ: ಒಂದೊಂದು ಕಥೆ ಬಿಚ್ಚಿಡುತ್ತಿವೆ ವರನಟಿ ಭಾವ ಚಿತ್ರಗಳು!
ಪುಷ್ಪಾ 2 Vs ಆರ್ಆರ್ಆರ್, ಕಲ್ಕಿ 2898 ಎಡಿ: ಸೋಮವಾರದಂದು ಪುಷ್ಪ 2 ಕಲೆಕ್ಷನ್ನಲ್ಲಿ ಒಂದಿಷ್ಟು ಕುಸಿತ ಕಂಡಿದ್ದರೂ, ಇತ್ತೀಚಿನ ಇತರೆ ಬಿಗ್ ಹಿಟ್ಸ್ಗೆ ಹೋಲಿಸಿದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 5ನೇ ದಿನ, ನೆಟ್ ಕಲೆಕ್ಷನ್ ಗಮನಿಸಿದರೆ ಪುಷ್ಪ 2 ಚಿತ್ರ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಮತ್ತು ನಾಗ್ ಅಶ್ವಿನ್ ಅವರ ಕಲ್ಕಿ 2898 ಎಡಿ ಎರಡನ್ನೂ ಮೀರಿಸಿದೆ. 2022ರ ಬ್ಲಾಕ್ಬಸ್ಟರ್ ಆರ್ಆರ್ಆರ್ ತನ್ನ 5ನೇ ದಿನ 49.95 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಕಲ್ಕಿ 2898 ಎಡಿ ಶೀರ್ಷಿಕೆಯ ಈ ಸಾಲಿನ ಸಿನಿಮಾ 34.15 ಕೋಟಿ ರೂ. ಸಂಗ್ರಹಿಸಿತ್ತು. ಪುಷ್ಪ 2, ತನ್ನ ಕೊಂಚ ಕುಸಿತದ ಹೊರತಾಗಿಯೂ, ಭಾರತದಲ್ಲಿ ಬಾಕ್ಸ್ ಆಫೀಸ್ ಪಯಣ ಮುಂದುವರಿಸಿದೆ.