ಚಂದನವನದ ಅತ್ಯುತ್ತಮ ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಮೂರು ವರ್ಷಗಳಾಗಿದ್ದು, ಅವರ ನೆನಪು ಮಾತ್ರ ಅಭಿಮಾನಿಗಳೆದೆಯಲ್ಲಿ ಸದಾ ಜೀವಂತವಾಗಿದೆ. ನಟ, ನಿರ್ಮಾಪಕನಾಗಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಇವರು ಹಿನ್ನೆಲೆ ಗಾಯಕರಾಗಿಯೂ ಮನರಂಜನಾ ಉದ್ಯಮಕ್ಕೆ ತಮ್ಮ ಸೇವೆ ನೀಡಿದ್ದಾರೆ.
ಹಿನ್ನೆಲೆ ಗಾಯಕರಾಗಿ ಪುನೀತ್ ರಾಜ್‌ಕುಮಾರ್ ಅವರ ಹಿಟ್ ಸಾಂಗ್ಸ್:
ಕಾಣದಂತೆ ಮಾಯವಾದನು (1982): 'ಚಲಿಸುವ ಮೋಡಗಳು' ಚಿತ್ರದ ಕಾಣದಂತೆ ಮಾಯವಾದನು ಹಾಡಿಗೆ ಅಪ್ಪು ಕಂಠದಾನ ಮಾಡಿದ್ದಾರೆ. ಅಲ್ಲದೇ ಚಿತ್ರದಲ್ಲಿನ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು.
ತಾಲಿಬಾನ್ ಅಲ್ಲಾ ಅಲ್ಲಾ (2002): 'ಅಪ್ಪು' ಚಿತ್ರದ ತಾಲಿಬಾನ್ ಅಲ್ಲಾ ಅಲ್ಲಾ ಹಾಡನ್ನು ಹಾಡಿದ್ದಾರೆ. ಈ ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ಇಬ್ಬರೂ ಚಿತ್ರರಂಗ ಪ್ರವೇಶಿಸಿದರು. ಬಾಲ ನಟನಾಗಿ ಗುರುತಿಸಿಕೊಂಡಿದ್ದರೂ ಇದು ನಾಯಕ ನಟನಾಗಿ ಪುನೀತ್ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ. ಪುರಿ ಜಗನ್ನಾಥ್ ನಿರ್ದೇಶಿಸಿರುವ ರೊಮ್ಯಾಂಟಿಕ್ ಆ್ಯಕ್ಷನ್ ಕಾಮಿಡಿ ಸಿನಿಮಾ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಜೊತೆ ಜೊತೆಯಲಿ (2008): ಆ್ಯಕ್ಷನ್ ಸಿನಿಮಾ 'ವಂಶಿ'ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪುನೀತ್ ಚಿತ್ರದ ಜೊತೆ ಜೊತೆಯಲಿ ಹಾಡಿಗೆ ತಮ್ಮ ದನಿ ನೀಡಿದ್ದಾರೆ. ಡ್ಯುಯೆಟ್ ಸಾಂಗ್ನಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರೊಂದಿಗೆ ತಮ್ಮ ದನಿಗೂಡಿಸಿದ್ದಾರೆ. ಚಿತ್ರದ ಜನಪ್ರಿಯ ಹಾಡುಗಳಲ್ಲಿ ಒಂದಾದ 'ಜೊತೆ ಜೊತೆಯಲಿ' ರಾಮ್ ನಾರಾಯಣ್ ಅವರ ಸಾಹಿತ್ಯ ಒಳಗೊಂಡಿದೆ.
ಹೊಸ ಗಾನ ಬಜಾನಾ (2009): ಪುನೀತ್ ರಾಜ್‌ಕುಮಾರ್ ಮತ್ತು ಪ್ರಿಯಾಮಣಿ ನಟನೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ರಾಮ್', ತೆಲುಗಿನ ಹಿಟ್ ಚಿತ್ರ 'ರೆಡಿ'ಯ ರೀಮೇಕ್. ಯೋಗರಾಜ್ ಭಟ್ ಬರೆದ 'ಹೊಸ ಗಾನ ಬಜಾನ'ವನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದು, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈಗಲೂ ಅಪ್ಪು ಅಭಿಮಾನಿಗಳ ಫೇವರೆಟ್ ಸಾಂಗ್ ಇದಾಗಿದೆ.
ಮೈಲಾಪುರ ಮೈಲಾರಿ (2010): 'ಮೈಲಾರಿ' ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಹಾಗೂ ಸದಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಮೈಲಾಪುರ ಮೈಲಾರಿ ಹಾಡನ್ನು ಶಿವ ರಾಜ್‌ಕುಮಾರ್ ಸಹೋದರ ಪುನೀತ್ ಹಾಡಿದ್ದಾರೆ. ಈ ಹಾಡಿಗೆ ಗುರುಕಿರಣ್ ಸಂಗೀತ ನೀಡಿದ್ದು, ಕವಿರಾಜ್ ಅವರ ಸಾಹಿತ್ಯವಿದೆ.
ಕಣ್ಣ ಸನ್ನೆಯಿಂದಲೇನೆ (2016): 'ಅಕಿರಾ' ಚಿತ್ರದ ಕಣ್ಣ ಸನ್ನೆಯಿಂದಲೇನೆ ಹಾಡಿಗೆ ಅಪ್ಪು ಕಂಠದಾನ ಮಾಡಿದ್ದು, ಸೂಪರ್ ಡೂಪರ್ ಹಿಟ್ ಆಗಿತ್ತು. ಬಿ.ಅಜನೀಶ್ ಲೋಕನಾಥ್ ಸಂಯೋಜಿಸಿರುವ ಈ ಲವ್ ಸಾಂಗ್ ಸುಮಧುರವಾಗಿ ಮೂಡಿಬಂದಿದೆ. ಇದು ಪುನೀತ್ ಅವರ ಇತರೆ ಹಾಡುಗಳಿಗಿಂತ ವಿಭಿನ್ನವಾಗಿದೆ.
ಜಣಕ್ ಜಣಕ್ (2016): 'ರನ್ ಆಂಟೋನಿ' ಚಿತ್ರದ ಜಣಕ್ ಜಣಕ್ ಹಾಡು ಪುನೀತ್ ಕಠಸಿರಿಯಲ್ಲಿ ಮೂಡಿಬಂದಿದೆ. ಮಣಿಕಾಂತ್ ಕದ್ರಿ ಸಂಯೋಜಿಸಿರುವ ಈ ಹಾಡು, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನೊಳಗೊಂಡಿದೆ.
ಅಭಿಮಾನಿಗಳೇ ನಮ್ಮನೆ ದೇವ್ರು (2016): ಪುನೀತ್ ರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ದೊಡ್ಡಮನೆ ಹುಡ್ಗ ಚಿತ್ರದ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡನ್ನು ಶಿವ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಸೇರಿ ಹಾಡಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವನ್ನು ಈ ಸಾಂಗ್ ಒಳಗೊಂಡಿದೆ.
ಯಾಕಿಂಗಾಗಿದೆ (2017): ಪುನೀತ್ ರಾಜ್‌ಕುಮಾರ್ ಅವರ ಮತ್ತೊಂದು ಪೆಪ್ಪಿ ಸಾಂಗ್ 'ಯಾಕಿಂಗಾಗಿದೆ'. ಹಾಡು ಸೂಪರ್ ಹಿಟ್ ರಾಜಕುಮಾರ ಸಿನಿಮಾದ್ದು. ಚಿತ್ರವನ್ನು ಸಂತೋಷ್ ಆನಂದ್ ರಾಮ್ ಬರೆದು ನಿರ್ದೇಶಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಮತ್ತು ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ.
ಏನ್ ಮಾಡೋಡು ಸ್ವಾಮಿ (2020): 'ಫ್ರೆಂಚ್ ಬಿರಿಯಾನಿ' ಶೀರ್ಷಿಕೆಯ ಕಾಮಿಡಿ ಡ್ರಾಮಾದ 'ಏನ್ ಮಡೋಡು ಸ್ವಾಮಿ' ಹಾಡು ಸೂಪರ್ ಹಿಟ್ ಆಗಿತ್ತು. ಪನ್ನಗಾಭರಣ ನಿರ್ದೇಶನದ ಚಿತ್ರದಲ್ಲಿ ಡ್ಯಾನಿಶ್ ಸೇಟ್ ಮತ್ತು ಸಾಲ್ ಯೂಸುಫ್ ನಟಿಸಿದ್ದರು. ಈ ಫನ್ ಟ್ರ್ಯಾಕ್ ವಾಸುಕಿ ವೈಭವ್ ಮತ್ತು ಅವಿನಾಶ್ ಬಾಳೆಕ್ಕಳ ಅವರ ಸಾಹಿತ್ಯ ಹೊಂದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ (1981): 'ಭಾಗ್ಯವಂತ' ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡನ್ನು ಪುನೀತ್ ತಮ್ಮ ಕಿರಿ ವಯಸ್ಸಿನಲ್ಲೇ ಹಾಡಿದ್ದರು. ಚಿತ್ರದಲ್ಲಿ ಪುನೀತ್ ಮತ್ತು ಕೆ.ಎಸ್.ಅಶ್ವಥ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.