ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ಪುಲ್ಕಿತ್ ಸಾಮ್ರಾಟ್ ಹಾಗೂ ಕೃತಿ ಖರಬಂದ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅದ್ಧೂರಿಯಾಗಿ ಜರುಗಿದ ಖಾಸಗಿ ಸಮಾರಂಭದಲ್ಲಿ ತಮ್ಮ ಆಪ್ತರು ಮತ್ತು ಕುಟುಂಬ ಸದಸ್ಯರ ಎದುರು ಹಾರ ಬದಲಾಯಿಸಿಕೊಂಡಿದ್ದಾರೆ.
ಹರಿಯಾಣದ ಮನೇಸರ್‌ನಲ್ಲಿರುವ ಐಟಿಸಿ ಗ್ರ್ಯಾಂಡ್ ಹೋಟೆಲ್ನಲ್ಲಿ ಪಂಜಾಬಿ ಸಂಪ್ರದಾಯಗಳ ಪ್ರಕಾರ ಮದುವೆ ನಡೆದಿದೆ. ಸಮಾರಂಭಕ್ಕೆ ಸರಿಸುಮಾರು 200 ಅತಿಥಿಗಳು ಸಾಕ್ಷಿಯಾಗಿದ್ದರು. ದೆಹಲಿಯ ಜನಪ್ರಿಯ ಚಾಟ್‌ಗಳು ಮತ್ತು ಕೋಲ್ಕತ್ತಾ, ಬನಾರಸ್, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಭಕ್ಷ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ ಎಂದು ವರದಿಯಾಗಿದೆ.
ಮದುವೆ ಊಟ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಕೋಲ್ಕತ್ತಾ, ಬನಾರಸ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿ ಒಳಗೊಂಡಂತೆ ಭಾರತದ ವಿವಿಧ ಪ್ರದೇಶಗಳ ವೈವಿಧ್ಯಮಯ ಪಾಕಪದ್ಧತಿಗಳನ್ನು ಪ್ರತಿನಿಧಿಸುವ ಔತಣಕೂಟ ಆಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ವರನ ಆದ್ಯತೆಯ ಮೇರೆಗೆ, ಮೆನು ದೆಹಲಿಯ ಪ್ರಸಿದ್ಧ ಚಾಟ್ಗಳನ್ನು ಒಳಗೊಂಡಿತ್ತು.
ಮಾರ್ಚ್ 14ರಂದು ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರಬಂದ ಜೋಡಿಯ ಮೆಹಂದಿ ಮತ್ತು ಸಂಗೀತ ಸಮಾರಂಭಗಳು ನಡೆದವು. ಮರುದಿನ ಹಲ್ದಿ ಸಮಾರಂಭ ಆಯೋಜಿಸಲಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ. ತಾರಾ ಜೋಡಿಯ ಆಪ್ತರಾದ ಅಲಿ ಫಜಲ್, ರಿಚಾ ಚಡ್ಡಾ, ಶಿಬಾನಿ ದಾಂಡೇಕರ್, ಫರ್ಹಾನ್ ಅಖ್ತರ್, ವರುಣ್ ಶರ್ಮಾ ಮತ್ತು ಜೋಯಾ ಅಖ್ತರ್ ಸೇರಿದಂತೆ ಹಲವರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ವೀರೇ ಕಿ ವೆಡ್ಡಿಂಗ್, ತೈಶ್ ಮತ್ತು ಪಾಗಲ್ಪಂತಿಯಂತಹ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿರುವ ಈ ಜೋಡಿ ದೆಹಲಿ ಮೂಲದವರು. ತಮ್ಮ ಮೂಲ ಸ್ಥಳಕ್ಕೆ ಹತ್ತಿರವಾಗೋ ಉತ್ತಮ ಪ್ರದೇಶವನ್ನಾರಿಸಿ ಮದುವೆ ಆಗಿದ್ದಾರೆ. ಪುಲ್ಕಿತ್ ಈ ಹಿಂದೆ ಶ್ವೇತಾ ರೋಹಿರಾ ಅವರನ್ನು ಮದುವೆಯಾಗಿದ್ದರು. ಸದ್ಯ ಕೃತಿಯೊಂದಿಗೆ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: ಪಂಜಾಬಿ ಸಂಪ್ರದಾಯದಂತೆ ಕೃತಿ-ಪುಲ್ಕಿತ್ ಮದುವೆ: ಇಂದು ಮೆಹಂದಿ ಶಾಸ್ತ್ರ, ಸಮಾರಂಭಗಳು ಶುರು
ತಾವು ಸ್ಕ್ರೀನ್ ಶೇರ್ ಮಾಡಿರೋ ಪಾಗಲ್ಪಂತಿ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಮೊದಲ ಬಾರಿ ಭೇಟಿಯಾದರು. ಸೆಟ್ನಲ್ಲೇ ಜೋಡಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದರು ಎಂದು ಹೇಳಲಾಗಿದೆ. ಆ ವೇಳೆ, ಡೇಟಿಂಗ್ ವದಂತಿಗಳೆದ್ದಿದ್ದವು. ಬಳಿಕ ಸಿನಿಮಾ ಪ್ರಮೋಶನ್ ಸಂದರ್ಭ ಊಹಾಪೋಹಗಳ ಬಗ್ಗೆ ಮಾತನಾಡಿದ್ದ ಕೃತಿ ಖರಬಂದ, ಅವುಗಳು ಕೇವಲ ವದಂತಿಗಳಲ್ಲ ಎಂದು ಹೇಳೋ ಮುಖೇನ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಖಚಿತಪಡಿಸಿದ್ದರು. ನಂತರದ ದಿನಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಬಹುದಿನಗಳ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಇದನ್ನೂ ಓದಿ: ಮೊದಲ ದಿನವೇ ₹ 4 ಕೋಟಿ ವ್ಯವಹಾರ ನಡೆಸಿದ 'ಯೋಧ': ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ