ನಟ - ನಿರ್ಮಾಪಕ ಕ್ರಿಶನ್ ಕುಮಾರ್ ಪುತ್ರಿ ಮತ್ತು ಟಿ-ಸೀರಿಸ್‌ನ ಸಹ-ಮಾಲೀಕರಾದ ತಿಶಾ ಕುಮಾರ್ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಬಹು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ತಿಶಾ ನಿನ್ನೆ (ಜುಲೈ 18, ಗುರುವಾರ) ನಿಧನರಾದರು. ಕುಮಾರ್ ಕುಟುಂಬದ ಮೂಲಗಳು ಮಾಧ್ಯಮಗಳಿಗೆ ತಿಶಾ ಕುಮಾರ್ ಮರಣವನ್ನು ದೃಢಪಡಿಸಿದ್ದಾರೆ. ಕ್ಯಾನ್ಸರ್ ಹಿನ್ನೆಲೆ ತಿಶಾ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಇಂದು, ಟಿ-ಸೀರಿಸ್‌ನ ವಕ್ತಾರರು ತಿಶಾ ಕುಮಾರ್ ನಿಧನದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "ಕ್ರಿಶನ್ ಕುಮಾರ್ ಅವರ ಪುತ್ರಿ ತಿಶಾ ಕುಮಾರ್ ಅವರು ದೀರ್ಘಕಾಲದ ಅನಾರೋಗ್ಯ ಹಿನ್ನೆಲೆ ನಿನ್ನೆ ನಿಧನರಾದರು. ಇದು ಕುಟುಂಬಕ್ಕೆ ಬಹಳ ಕಠಿಣ ಸಮಯ. ಅವರ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕು ಎಂದು ನಾವು ನಿಮ್ಮಲ್ಲಿ ವಿನಂತಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಿಶಾ ಕುಮಾರ್, ಕ್ರಿಶನ್ ಕುಮಾರ್ ಮತ್ತು ತಾನ್ಯಾ ಸಿಂಗ್ ದಂಪತಿಯ ಪುತ್ರಿ. 2003ರ ಸೆಪ್ಟೆಂಬರ್ 6ರಂದು ಜನಿಸಿದರು. ಸ್ವಭಾವದಲ್ಲಿ ಬಹಳ ಖಾಸಗಿ ವ್ಯಕ್ತಿ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. 2023ರ ನವೆಂಬರ್ನಲ್ಲಿ ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅನಿಮಲ್ ಚಿತ್ರದ ಪ್ರಥಮ ಪ್ರದರ್ಶನದ ಸಂದರ್ಭ ಕಾಣಿಸಿಕೊಂಡಿದ್ದರು. ಆ ಸಂದರ್ಭ, ತಿಶಾ ತಮ್ಮ ತಂದೆ ಕ್ರಿಶನ್ ಕುಮಾರ್ ಜೊತೆ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದರು.
ಇದನ್ನೂ ಓದಿ: Watch.. ಮದುವೆ ಯಾವಾಗ? ನಟಿ ಶ್ರದ್ಧಾ ಕಪೂರ್ ಕೊಟ್ಟ ಉತ್ತರವಿದು - Shraddha Kapoor Marriage
ಕ್ರಿಶನ್ ಕುಮಾರ್ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿದ್ದಾರೆ. 1995ರ ಸಿನಿಮಾ 'ಬೇವಫಾ ಸನಮ್'ನಲ್ಲಿನ ಪಾತ್ರದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಸೋದರಳಿಯ ಭೂಷಣ್ ಕುಮಾರ್ ಅವರೊಂದಿಗೆ ಟಿ-ಸೀರಿಸ್‌ನ ಸಹ-ಮಾಲೀಕರಾಗಿ ಗುರುತಿಸಿಕೊಂಡಿದ್ದಾರೆ. ಲಕ್ಕಿ: ನೋ ಟೈಮ್ ಫಾರ್ ಲವ್, ರೆಡಿ, ಡಾರ್ಲಿಂಗ್, ಸತ್ಯಮೇವ ಜಯತೆ, ಭೂಲ್ ಭುಲೈಯಾ 2 ಮತ್ತು 'ಅನಿಮಲ್'ನಂತಹ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಒಟ್ಟಿಗೆ ನಿರ್ಮಿಸಿದ್ದಾರೆ. ಸದ್ಯ ತಿಶಾ ಕುಮಾರ್ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಕುಮಾರ್ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ -ನತಾಶಾ ಡಿವೋರ್ಸ್: ಈ ಜೋಡಿಯ ಜೀವನದ ಒಂದು ನೋಟ - Hardik Natasa
2021ರ ಡಿಸೆಂಬರ್ 1ರಂದು ತೆರೆಗಪ್ಪಳಿಸಿದ ಅನಿಮಲ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಬರೋಬ್ಬರಿ 900 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಸಹ ನಿರ್ಮಾಪಕರಾಗಿ ಕ್ರಿಶನ್ ಕುಮಾರ್ ಅವರು ಈ ಚಿತ್ರತಂಡದ ಭಾಗವಾಗಿದ್ದರು.