ಪ್ರಿಯಾಂಕಾ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ನಟಿ. ಗ್ಲ್ಯಾಮರ್, ಮಹಿಳಾ ಪ್ರಧಾನ ಚಿತ್ರಗಳಿಂದ ಗಮನ ಸೆಳೆದಿರುವ ಪ್ರಿಯಾಂಕಾ ಅವರೀಗ ಆ್ಯಕ್ಷನ್ ನಟಿಯಾಗಿ 'ಉಗ್ರಾವತಾರ' ತಾಳಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರುವ ಈ ಚಿತ್ರವನ್ನು ಗುರುಮೂರ್ತಿ ರಚಿಸಿ, ನಿರ್ದೇಶಿಸಿದ್ದಾರೆ. ಉಗ್ರಾವತಾರ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗೆಸಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಪ್ರಿಯಾಂಕಾ ಪತಿ ರಿಯಲ್ ಸ್ಟಾರ್ ಉಪೇಂದ್ರ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, "ನಿರ್ದೇಶಕರ ಶ್ರಮ ಕಾಣಿಸುತ್ತಿದೆ. ಆದಾಗ್ಯೂ, ಅವರು ದುಗುಡದಿಂದ ಇದ್ದಾರೆ. ಮೊದಲ ಬಾರಿ ನನಗೂ ಅದೇ ಆಗಿತ್ತು. ಆದ್ರೆ ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತೀರಿ. ಮನೆಯಲ್ಲಿ ಪ್ರಿಯಾಂಕಾ ಅವರ ಉಗ್ರಾವತಾರವನ್ನು ನಾನು ನೋಡಿದ್ದೇನೆ. ಮುಂದೆ ನೀವುಗಳು ನೋಡುತ್ತೀರಿ. ಆದ್ರೆ ಪೊಲೀಸರು ಗ್ಲ್ಯಾಮರಸ್ ಆಗಿ ಕಾಣಿಸಬಾರದು. ಅದೇ ನನ್ನ ಆಕ್ಷೇಪಣೆ. ಗ್ಲ್ಯಾಮರಸ್ ಆಗಿ ಕಂಡರೆ ರೌಡಿಗಳನ್ನು ಹೇಗೆ ಸದೆಬಡಿಯುತ್ತಿರಿ" ಎಂದು ಹಾಸ್ಯ ಚಟಾಕಿ ಹಾರಿಸಿದರು.
ಮಾತು ಮುಂದುವರಿಸುತ್ತಾ, "ನಿಮ್ಮ, ಜನರ ಆಶೀರ್ವಾದವಿದ್ದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತದೆ. ಸಣ್ಣಪುಟ್ಟ ತಪ್ಪುಗಳು ಇರುತ್ತವೆ. ಅದನ್ನು ಕ್ಷಮಿಸುವಂತಹ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿದೆ. ಸಿನಿಮಾ ನೋಡದೇ ಅಭಿಪ್ರಾಯ ತಿಳಿಸಬೇಡಿ" ಎಂದು ಕೋರಿಕೊಂಡರು.
ನಾಯಕಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, "ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಸ್ವಯಂರಕ್ಷಣೆ, ಸುರಕ್ಷ ಆ್ಯಪ್ ಜೊತೆಗೆ ಪೊಲೀಸರಿಗೂ ಗೌರವ ಕೊಡಿ. ಅವರು ಸಮಾಜದ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ" ಎಂದರು.
"ಮೇಡಂ ಕಥೆ ಕೇಳಿ ನಾನು ಮಾಡುತ್ತೇನೆಂದು ಹೇಳಿದ ದಿನದಿಂದ ಈವರೆಗೂ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಸಾಮಾಜಿಕ ಕಳಕಳಿ, ಹೆಣ್ಣಿಗೆ ಹೇಗೆ ಗೌರವ ಕೊಡಬೇಕು, ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆ ಹೊರಗಿನ ಹೆಣ್ಣು ಮಕ್ಕಳನ್ನೂ ಅದೇ ರೀತಿಯಲ್ಲಿ ಕಾಣಬೇಕು. ಸಮಾಜದಲ್ಲಿ ನಡೆಯುವಂತಹ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಮೇಡಂ ಈ ಚಿತ್ರದಿಂದ ಆ್ಯಕ್ಷನ್ ಕ್ವೀನ್ ಆಗಿದ್ದಾರೆ. ಐದು ಸಾಹಸಗಳು ವಿಭಿನ್ನವಾಗಿದೆ. ಇದಕ್ಕಾಗಿ ಅವರು ದೇಹಕ್ಕೆ ಕಸರತ್ತು ನೀಡಿ ಕ್ಯಾಮಾರಾ ಎದುರು ಬಂದಿದ್ದಾರೆ. ನಾಲ್ಕು ಭಾಷೆಯ ಡಬ್ಬಿಂಗ್ ಮುಗಿದಿದೆ. ಇನ್ನೇನಿದ್ದರೂ ಪ್ರಚಾರ ಶುರು ಮಾಡಬೇಕು. ದಯವಿಟ್ಟು ಟಾಕೀಸ್‌ಗೆ ಬನ್ನಿ, ಪ್ರೋತ್ಸಾಹಿಸಿ" ಎಂದು ನಿರ್ದೇಶಕ ಗುರುಮೂರ್ತಿ ಕೇಳಿಕೊಂಡರು.
ಇದನ್ನೂ ಓದಿ: ಯುವ ರಾಜ್‍ಕುಮಾರ್ 2ನೇ ಸಿನಿಮಾ ಅನೌನ್ಸ್: ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿರ್ಮಾಪಕಿ, ನಿರ್ದೇಶಕ ಯಾರು?
ರೋಬೋ ಗಣೇಶ್, ಲತಾ, ದರ್ಶನ್ ಸೂರ್ಯ, ಲಕ್ಷೀಶೆಟ್ಟಿ, ಚರಣ್, ಲೀಲಾ ಮೋಹನ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣಬಸ್ರೂರು ಸಂಗೀತ ನೀಡಿದ್ದು, ನಂದಕುಮಾರ್ ಅವರ ಛಾಯಾಗ್ರಾಹಣವಿದೆ.
ಇದನ್ನೂ ಓದಿ: 'ವೆಟ್ಟೈಯನ್' ಕಲೆಕ್ಷನ್: ಅಮಿತಾಭ್ ಬಚ್ಚನ್, ರಜನಿಕಾಂತ್ ಸಿನಿಮಾ ಗಳಿಸಿದ್ದಿಷ್ಟು
ಈವೆಂಟ್ನಲ್ಲಿ ಉಪೇಂದ್ರ ಸಹೋದರನ ಪುತ್ರ ನಟ ನಿರಂಜನ್ ಸುದೀಂಧ್ರ, ನಿದರ್ಶನ್ ಉಪಸ್ಥಿತರಿದ್ದರು. ಎಸ್‌ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ ಎಸ್.ಜಿ.ಸತೀಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ನಿಂದ ಸದ್ದು ಮಾಡುತ್ತಿರುವ ಉಗ್ರಾವತಾರ ಶೀಘ್ರದಲ್ಲೇ ತೆರೆಗೆ ಬರಲಿದೆ.