ಮಾಲಿವುಡ್ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಟನೆಯ 'ಆಡುಜೀವಿತಂ-ದಿ ಗೋಟ್ ಲೈಫ್' ಸದ್ಯ ದೇಶದ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಸದ್ಯ ಟ್ರೈಲರ್ನಿಂದಲೇ ಕ್ರೇಜ್ ಹುಟ್ಟಿಸಿರುವ ಈ ಚಿತ್ರ ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ಅದೃಷ್ಟ ಹುಡುಕುತ್ತಾ ವಿದೇಶಕ್ಕೆ ವಲಸೆ ಹೋದ ಯುವಕ ನಜೀಬ್‌ನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್, ಟೀಸರ್ ಕುತೂಹಲ ಮೂಡಿಸಿದೆ. ಚಿತ್ರದ ಪ್ರಚಾರಕ್ಕಾಗಿ ನಟ ಪೃಥ್ವಿರಾಜ್, ನಿರ್ದೇಶಕ ಬ್ಲೆಸ್ಲಿ ಹಾಗೂ ನಟ ಜಿಮ್ಮಿ ಜೀನ್ ಲೂಯಿಸ್ ಬೆಂಗಳೂರಿಗೆ ಆಗಮಿಸಿದ್ದು, ಚಿತ್ರದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡರು.
ಮೊದಲು ಮಾತನಾಡಿದ ಪೃಥ್ವಿರಾಜ್, 2018ರಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು, ನಂತರ ಕೋವಿಡ್ ಸೇರಿ ಅನೇಕ ಕಾರಣದಿಂದ ತಡವಾಗಿದೆ. ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾ ಇದಾಗಿದ್ದೂ ಒಂದು ಇನ್ಸ್ಪಿರೇಷನ್ ಕಥೆ ಒಳಗೊಂಡಿದೆ. ನಜೀಬ್ ಮೊಹಮ್ಮದ್ ಅವರ ನೈಜ ಕಥೆಯನ್ನು ಈ ಚಿತ್ರದ ಮೂಲಕ ತೆರೆಯಮೇಲೆ ತರುತ್ತಿದ್ದೇವೆ. 16 ವರ್ಷಗಳ ಸುರ್ಧಿರ್ಘ ಪಯಣದ ಕಥೆ ಸಹ ಒಳಗೊಂಡಿದೆ. ಈ ಮೊದಲು ಬೆನ್ನಿಮನ್ ಅವರು ನಜೀಮ್ ಅವರ ಕಥೆಯನ್ನು ಪುಸ್ತಕ ರೂಪದಲ್ಲಿ ತಂದರು. ಆ ಪುಸ್ತಕ ಮಾರಾಟ ದಾಖಲೆಯನ್ನೆ ಬರೆಯಿತು. ನಂತರ ಅದನ್ನೇ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ಸ್ವಲ್ಪ ಬ್ರೇಕ್ ಆಯ್ತು. ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ. ಈ ಚಿತ್ರ ಪಾತ್ರಕ್ಕಾಗಿ ನಾನು 31 ಕೆಜಿ ತೂಕ ಕಳೆದಿಕೊಂಡಿದ್ದೆ. ಒಂದೂವರೆಯಿಂದ ಎರಡು ವರ್ಷ ಶೂಟಿಂಗ್ ಸ್ಟಾಪ್ ಆಗಿದ್ದು, ವೇಟ್ ಲಾಸ್ ಮಾಡಿಕೊಳ್ಳಲು ಸಮಯ ಸಿಕ್ಕಿತು ಎಂದು ಹೇಳಿದರು.
ನಂತರ ಚಿತ್ರದ ನಿರ್ದೇಶಕ ಬ್ಲಸ್ಲಿ ಮಾತಾನಾಡಿ, ಈ ಸಿನಿಮಾ 16 ವರ್ಷಗಳ ಕನಸು, ಇದೊಂದು ನೈಜ ಕಥೆಯಾಗಿದ್ದು, ಫಿಷರ್ ಮ್ಯಾನ್ ನಜೀಬ್ ಅವರ ಕಥೆಯಾಗಿದೆ. ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆಆರ್ ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಸಂಗೀತ ನೀಡಿರುವುದು ವಿಶೇಷ ಎಂದು ಚಿತ್ರದ ಬಗ್ಗೆ ಕೆಲವು ಮಾಹಿತಿ ನೀಡಿದರು.
ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೇ ತಿಂಗಳ 28ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕಿರಂಗದೂರು ರಿಲೀಸ್ ಮಾಡುತ್ತಿದ್ದಾರೆ.