ಹೈದರಾಬಾದ್: ಬಹುಭಾಷಾ ನಟ ಪ್ರಭುದೇವ ಶೀಘ್ರದಲ್ಲೇ 'ಮೂನ್ ವಾಕ್' ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದು ಇವರ ಹೊಸ ಚಿತ್ರದ ಹೆಸರಾಗಿದ್ದು, ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮನೋಜ್ ಎನ್ಎಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ದಿವ್ಯಾ ಮನೋಜ್ ಮತ್ತು ಪ್ರವೀಣ್ ಎಲಕ್ ಅವರ ನಿರ್ಮಾಣ ಇದೆ.
ಅದ್ಭುತವಾದ ನೃತ್ಯ ಪ್ರದರ್ಶನ ಮತ್ತು ಕೌಟುಂಬಿಕ ಭಾವನೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಕಥಾ ಹಂದರವುಳ್ಳ ಚಿತ್ರ ಇದಾಗಿರಲಿದೆ ಎಂದು ಚಿತ್ರ ತಂಡ ಈಗಾಗಲೇ ಹೇಳಿಕೊಂಡಿದೆ. ಇತ್ತೀಚೆಗಷ್ಟೇ ತನ್ನ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿರುವ 'ಮೂನ್ ವಾಕ್' ಚಿತ್ರತಂಡ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್ ಅನ್ನು ಸಹ ಅನಾವರಣಗೊಳಿಸಿದೆ. 'ಮೂನ್ ವಾಕ್' ಮೂಲಕ ಪ್ರಭುದೇವ ಅವರ ಬಹುಮುಖ ಪ್ರತಿಭೆಯನ್ನು ಮತ್ತೊಮ್ಮೆ ತೆರೆಯ ಮೇಲೆ ತರುವುದಾಗಿ ಹೇಳಿಕೊಂಡಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ಪ್ರಭುದೇವ ಮತ್ತು ಎ.ಆರ್.ರೆಹಮಾನ್ 'ಮೂನ್ ವಾಕ್' ಮೂಲಕ ಮತ್ತೆ ಒಂದಾಗುತ್ತಿರುವುದರಿಂದ ಸಿನಿ ರಸಕರಿಗೂ ಕುತೂಹಲ ಮೂಡಿದೆ.
90 ದಶಕದಲ್ಲಿ ಇವರಿಬ್ಬರ ಕಾಂಬಿನೇಷನ್ನಲ್ಲಿ ಮುಕ್ಕಾಲ.. ಮುಕ್ಕಾಬುಲ್ಲಾ.. ಹಾಡು ಸೃಷ್ಟಿಯಾಗಿತ್ತು. ಇದು ಆಲ್ ಟೈಮ್ ಫೇವರಿಟ್ ಸಾಂಗ್ ಕೂಡ ಹೌದು. ಪ್ರಭುದೇವ ಡ್ಯಾನ್ಸ್ ಮತ್ತು ರೆಹಮಾನ್ ಅವರ ಟ್ಯೂನ್ ಸಿನಿಮಾ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇಂತಹ ಸೂಪರ್ ಹಿಟ್ ಹಾಡು ಹಾಗೂ ಸಿನಿಮಾವನ್ನು ಕೊಟ್ಟ ಜೋಡಿ ಇದೀಗ 'ಮೂನ್ ವಾಕ್' ಮೂಲಕ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ. ಯೋಗಿ ಬಾಬು, ಅರ್ಜುನ್ ಅಶೋಕನ್ ಮತ್ತು ದೀಪಾ ಶಂಕರ್ ಸೇರಿದಂತೆ ಪ್ರತಿಭಾವಂತ ತಾರಾ ಬಳಗವೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಬೇಬಿಮೂನ್‌ಗಾಗಿ ಲಂಡನ್‌ಗೆ ತೆರಳಿದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ - Deepveer Airport Spotting