ಬೆಂಗಳೂರು: ''ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್ ಆದಷ್ಟು ಬೇಗ ಅದರಿಂದ ಆಚೆ ಬರಲಿ. ಚಿತ್ರರಂಗಕ್ಕೆ ಅವರ ಕಾಂಟ್ರುಬ್ಯೂಷನ್ ತುಂಬಾನೇ ಇದೆ. ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಆದ್ರೆ ಅವರು ನಿರಪರಾಧಿಯಾಗಿ ಆಚೆ ಬರಲಿ'' ಎಂದು ನಟ ಪ್ರೇಮ್ ತಿಳಿಸಿದ್ದಾರೆ.
ಮುಂದುವರಿದ ಮಿಶ್ರ ಪ್ರತಿಕ್ರಿಯೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಇದೆ.
ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಪ್ರೇಮ್: ಈ ಹಿಂದೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸದೇ ನೋ ಕಾಮೆಂಟ್ಸ್ ಎಂದಿದ್ದ ನೆನಪಿರಲಿ ಪ್ರೇಮ್ ಅವರೀಗ ದರ್ಶನ್ ಪರ ಮಾತನಾಡಿದ್ದಾರೆ. ಅಭಿ, ಅರಸು ಸಿನಿಮಾದ ನಿರ್ದೇಶಕ ಮಹೇಶ್ ಬಾಬು ಹೊಸ ಸಿನಿಮಾದ ಮುಹೂರ್ತಕ್ಕೆ ಬಂದಿದ್ದ ಪ್ರೇಮ್ ಇದೇ ಮೊದಲ ಬಾರಿಗೆ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಮಾಡಿದ್ದು ಸರಿಯೇ? ''ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ, ಫೋಟೋಗಳು ನಿಜವೋ, ಸುಳ್ಳೋ ಎಂಬುದು ನಮಗೂ ಗೊತ್ತಿಲ್ಲ. ಪ್ರಕರಣ ಕಾನೂನಿನ ಚೌಕಟ್ಟಿನಲ್ಲಿದೆ. ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೂ ನೋವಿದೆ. ಆದರೆ ರೇಣುಕಾಸ್ವಾಮಿ ಮಾಡಿದ್ದು ಒಳ್ಳೆ ಕೆಲಸ ಅಲ್ಲ. ಅವರು ಮಾಡಿರುವ ಮೆಸೇಜ್ಗಳು ಸರಿ ಇವೆಯಾ?. ಆದ್ರೆ ಅವರ ಕುಟುಂಬಕ್ಕೆ ಆ ನೋವು ಭರಿಸುವ ಶಕ್ತಿಯನ್ನು ಆ ದೇವರು ಕೊಡಲಿ'' ಎಂದು ಪ್ರೇಮ್ ತಿಳಿಸಿದರು.
ಇದನ್ನೂ ಓದಿ: 'ಎಮರ್ಜೆನ್ಸಿ' ಸಿನಿಮಾ ಮತ್ತೆ ಮುಂದೂಡಿಕೆ: ಕಂಗನಾ ರಣಾವತ್ಗೆ ಸಂಕಷ್ಟ - Emergency Movie Delay
ಸ್ಯಾಂಡಲ್ವುಡ್ನಲ್ಲಿ ದೌರ್ಜನ್ಯ ನಡೆದಿಲ್ಲ: ಇದರ ಜೊತೆಗೆ ಸದ್ಯ ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ತಡೆಯುವ ನಿಟ್ಟಿನಲ್ಲಿ 'ಫೈರ್ - ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ'ಯು ಕಮಿಟಿಯೊಂದರ ರಚನೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿರುವ ಬಗ್ಗೆ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಬೇರೆ ಇಂಡಸ್ಟ್ರಿ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಮಡಿವಂತಿಕೆ ಇದೆ. ಸಮಿತಿ ಬೇಕು ಎಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗಿದೆ. ಎಲ್ಲಾ ಹೆಣ್ಣುಮಕ್ಕಳಿಗೆ ಒಳ್ಳೆಯದಾಗುತ್ತೆ ಅಂದ್ರೆ ನಮ್ಮ ಸಪೋರ್ಟ್ ಇರುತ್ತದೆ. ಕಮಿಟಿ ಆಗಲಿ. ನಾನು ಇಂಡಸ್ಟ್ರಿಯಲ್ಲಿ ಈವರೆಗೆ 27 ಸಿನಿಮಾಗಳನ್ನು ಮಾಡಿದ್ದೇನೆ. ಅಂದಿನಿಂದ ಈವರೆಗೂ ಎಲ್ಲಾ ನಾಯಕಿಯರು ನಮ್ಮ ಜೊತೆ ಆತ್ಮೀಯರಾಗಿದ್ದಾರೆ. ದೌರ್ಜನ್ಯದಂತಹ ಘಟನೆ ನನ್ನ ಗಮನಕ್ಕೆ ಯಾವತ್ತೂ ಕೂಡ ಬಂದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಸಿನಿಮಾ ಚಿತ್ರೀಕರಣದ ವೇಳೆ ಲೈಟ್ ಬಾಯ್ ಸಾವು; ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR - FIR Against Yogaraj Bhat
ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ: ಗುರುವಾರ ಸಂಜೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಜೈಲು ನಿಯಮಗಳ ಪ್ರಕಾರ, ಅರ್ಧ ಗಂಟೆ ಮಾತನಾಡಿದ್ದಾರೆ. ವಿಜಯಲಕ್ಷ್ಮಿ ಜೊತೆಗೆ ದರ್ಶನ್ ಸಹೋದರ ದಿನಕರ್, ಸಂಬಂಧಿ ಸುಶಾಂತ್ ನಾಯ್ಡು ಕೂಡಾ ಜೊತೆಗಿದ್ದರು.