ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ, ಉಳಗನಾಯಗನ್ ಕಮಲ್ ಹಾಸನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಇಂಡಿಯನ್ 2'. ಈಗಾಗಲೇ ಟೀಸರ್ ಹಾಗೂ ಸೌರಾ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ಈ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಮೆಲೋಡಿ ಸಾಂಗ್ ರಿಲೀಸ್ ಆಗಿದೆ.
ಸಿದ್ದಾರ್ಥ್ ಹಾಗೂ ರಾಕುಲ್ ಪ್ರೀತ್ ಸಿಂಗ್ ಜೋಡಿಯ ಪ್ರೇಮಗೀತೆಗೆ (Neelorpam) ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಮ ಜೋಗಯ್ಯಶಾಸ್ತ್ರಿ ತೆಲುಗು ವರ್ಷನ್ ಹಾಡಿಗೆ ಸಾಹಿತ್ಯ ಬರೆದಿದ್ದು, ತಾಮರೈ ತಮಿಳು ವರ್ಷನ್ಗೆ ಪದ ಒದಗಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
1996 ರಲ್ಲಿ ಇಂಡಿಯನ್ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಎಂಬ ಪಾತ್ರದಲ್ಲಿ ಕಮಲ್ ಹಾಸನ್ ಅವರು ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ಇಂಡಿಯನ್ 2 ಸಿನಿಮಾ ಮೂಡಿ ಬರುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕಮಲ್ ಹಾಸನ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಅವರನ್ನು ಮತ್ತದೇ ಅವತಾರದಲ್ಲಿ ನೋಡಬಹುದಾಗಿದೆ.
ಕಮಲ್ ಹಾಸನ್ ಜೊತೆ ಸಿದ್ದಾರ್ಥ್, ಎಸ್.ಜೆ ಸೂರ್ಯ, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಂ, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಕಣಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲಾ ಕಿಶೋರ್ ಮತ್ತು ದೀಪಾ ಶಂಕರ್ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ಸಿನಿಮಾ ವೀಕ್ಷಣೆಗೆ ಬಂದ ವಿಜಯ್ ವರ್ಮಾ; ಪಾಪರಾಜಿಗಳ ಕ್ಯಾಮರಾಗೆ ಪೋಸ್ - Tamannaah Vijay
ಎಸ್. ಶಂಕರ್ ನಿರ್ದೇಶನದಲ್ಲಿ ಇಂಡಿಯನ್ 2 ಸಿನಿಮಾ ಮೂಡಿ ಬರುತ್ತಿದ್ದು, ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಇಂಡಿಯನ್ 2 ಚಿತ್ರ ಜುಲೈ 12 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅಂಬಾನಿ ಪುತ್ರನ ಮದುವೆ ಡೇಟ್ ಫಿಕ್ಸ್: ಮುಂಬೈನಲ್ಲಿ ನಡೆಯಲಿದೆ ಅದ್ಧೂರಿ ಸಮಾರಂಭ - Anant Radhika Wedding Date