ಮುಂಬೈ (ಮಹಾರಾಷ್ಟ್ರ): ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರಾದಲ್ಲಿರುವ ಜನಪ್ರಿಯ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ವಿರುದ್ಧ ಲುಕ್‌ಔಟ್ ನೋಟಿಸ್ (ಎಲ್‌ಒಸಿ) ಹೊರಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಈ ಪ್ರಕರಣದಲ್ಲಿ ಮಹಾರಾಷ್ಟ್ರ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ / Maharashtra Control of Organized Crime Act) ಯನ್ನು ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇತ್ತೀಚಿನ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಅನ್ಮೋಲ್ ಬಿಷ್ಣೋಯ್ ಹೇಳಿಕೊಂಡಿದ್ದ. ಈ ಹಿನ್ನೆಲೆ ಮುಂಬೈ ಪೊಲೀಸರು ಶುಕ್ರವಾರ ಎಲ್.ಓ.ಸಿ ಹೊರಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಈ ಪ್ರಕರಣದಲ್ಲಿ ಅನ್ಮೋಲ್ ಬಿಷ್ಣೋಯ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರನ್ನು ವಾಂಟೆಡ್ ಆರೋಪಿಗಳೆಂದು ಹೆಸರಿಸಲಾಗಿದೆ. ಅನ್ಮೋಲ್ ಬಿಷ್ಣೋಯ್ ಕೆನಡಾದಲ್ಲಿ ಉಳಿದುಕೊಂಡಿದ್ದಾನೆ. ಆದರೆ, ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್‌ನ ಐ ಪಿ ವಿಳಾಸವನ್ನು ಪೋರ್ಚುಗಲ್ ಎಂದು ಪತ್ತೆಹಚ್ಚಲಾಗಿದೆ '' ಎಂದು ಅಧಿಕಾರಿ ತಿಳಿಸಿದರು.
ಏಪ್ರಿಲ್ 14 ರ ಮುಂಜಾನೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಹೋಗಿದ್ದರು. ನಂತರ ಪೊಲೀಸರು ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಸ್ ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ಯಾವಾಗ? - Sandalwood Star movies
ಏಪ್ರಿಲ್ 15 ರಂದು ಬಿಹಾರದ ನಿವಾಸಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ನನ್ನು ಬಂಧಿಸಲಾಯಿತು. ಪಿಸ್ತೂಲ್ ಒದಗಿಸಿದ ಸೋನು ಕುಮಾರ್ ಸುಭಾಷ್ ಚಂದರ್ ಬಿಷ್ಣೋಯ್ (37) ಮತ್ತು ಅನುಜ್ ಥಾಪನ್ (32)ನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರಿನ ಹನುಮಾನ್ ದೇವಸ್ಥಾನದಲ್ಲಿ ಸುದೀಪ್ ದಂಪತಿಯಿಂದ ವಿಶೇಷ ಪೂಜೆ - Sudeep
ಪೊಲೀಸ್ ಮಾಹಿತಿ ಪ್ರಕಾರ, ಸೋನು ಬಿಷ್ಣೋಯ್ ಮತ್ತು ಥಾಪನ್ ಪಂಜಾಬ್‌ನ ಲಾರೆನ್ಸ್ ಬಿಷ್ಣೋಯ್ ಅವರ ಪ್ರದೇಶಕ್ಕೆ ಸಮೀಪವಿರುವ ಫಾಜಿಲ್ಕಾದಿಂದ ಬಂದವರು. ಪಂಜಾಬ್‌ನ ಗಂಗಾಪುರದಲ್ಲಿ ದಾಖಲಾದ ಗುಂಡಿನ ದಾಳಿ ಪ್ರಕರಣದಲ್ಲಿ ಲಾರೆನ್ಸ್ ಮತ್ತು ಅನ್ಮೋಲ್ ಅವರೊಂದಿಗೆ ಇಬ್ಬರೂ ಆರೋಪಿಗಳಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.