ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೃಷ್ಣಂ ಪ್ರಣಯ ಸಖಿ" ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ವಿ ಚಿತ್ರ ಅಬುದಾಬಿ ಹಾಗೂ ದುಬೈನಲ್ಲೂ ಪ್ರದರ್ಶನಗೊಂಡಿದೆ. ಅಲ್ಲಿನ ಕನ್ನಡಿಗರು ಅಪ್ಪಟ ಮನರಂಜನೆಯ ಚಿತ್ರಕ್ಕೆ ಫಿದಾ ಆಗಿದ್ದಾರೆ.
ಇತ್ತೀಚೆಗೆ ದುಬೈನಲ್ಲಿ ರಶ್ಮಿ ವೆಂಕಟೇಶ್, ಸೆಂದಿಲ್ ಮತ್ತು ತಂಡದವರು "ಕೃಷ್ಣಂ ಪ್ರಣಯ ಸಖಿ" ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿ ಮಾಳವಿಕ ನಾಯರ್, ನಟ ರಂಗಾಯಣ ರಘು, ನಿರ್ದೇಶಕ ಶ್ರೀನಿವಾಸರಾಜು, ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ಸೇರಿದಂತೆ ಚಿತ್ರತಂಡದ ಸದಸ್ಯರು ಈ ಸ್ಪೆಷಲ್ ಶೋನಲ್ಲಿ ಭಾಗವಹಿಸಿದ್ದರು.
ಸುಮಾರು 750ಕ್ಕೂ ಅಧಿಕ ಕನ್ನಡಿಗರು ಈ ಚಿತ್ರವನ್ನು ನೋಡಿ ಸಂಭ್ರಮಿಸಿದರು. ಜೊತೆಗೆ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ದುಬೈನಲ್ಲಿ ನಿಮ್ಮ ಜೊತೆ ಕೃಷ್ಣಂ ಪ್ರಣಯಂ ಸಖಿ ಚಿತ್ರವನ್ನು ವೀಕ್ಷಿಸಿದ್ದು, ತುಂಬಾನೆ ಸಂತೋಷ ಕೊಟ್ಟಿದೆ. ಹೀಗೆ ನಮ್ಮ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.
ನಂತರ ಹಿರಿಯ ನಟ ರಂಗಾಯಣ ರಘು ಮಾತನಾಡಿ, ನಮ್ಮ ಕೃಷ್ಣಂ ಪ್ರಣಯಂ ಸಖಿ ಸಿನಿಮಾವನ್ನು ದುಬೈನಲ್ಲಿರುವ ಕನ್ನಡಿಗರ ಜೊತೆ ವೀಕ್ಷಿಸಿದ್ದು, ಸಂತೋಷವಾಗಿದೆ ಎಂದು ತಿಳಿಸಿದರು.
'ಕೃಷ್ಣಂ ಪ್ರಣಯ ಸಖಿ' ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ಕಾಣಿಸಿಕೊಂಡಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜಾ, ಗಿರಿ ಶಿವಣ್ಣ ಸೇರಿದಂತೆ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಕೆ.ಎಂ.ಪ್ರಕಾಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದರು. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡಿದ್ದಾರೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿರೋ ಕೃಷ್ಣಂ ಪ್ರಣಯಂ ಸಖಿ ಚಿತ್ರಕ್ಕೆ ದುಬೈ ಕನ್ನಡಿಗರು ತೋರಿಸಿರೋ ಪ್ರೀತಿಗೆ ಗಣೇಶ್ ಅಂಡ್ ಟೀಮ್ ಸಂತಸಗೊಂಡಿದೆ.