ಸಿನಿಮಾ ಎಂದ ಮೇಲೆ ಟ್ರೇಲರ್ ಪ್ರಮುಖ ಆಮಂತ್ರಣ. ಆದ್ರೆ ಇಂದಿನ ಆಧುನಿಕ ಜಮಾನದಲ್ಲೂ ಟ್ರೇಲರ್ ಅನಾವರಣಗೊಳಿಸದೇ ಡೈರೆಕ್ಟ್ ಸಿನಿಮಾ ಬಿಡುಗಡೆಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ ಸ್ಯಾಂಡಲ್ವುಡ್ನ ಗೋಲ್ಡನ್ ಗಣಿ. ತನ್ನ ಸುಂದರ ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ದೊಡ್ದ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ 'ಕೃಷ್ಣಂ ಪ್ರಣಯ ಸಖಿ' ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ನಿರೀಕ್ಷೆಯಂತೆ ಸಿನಿಮಾ ಅಭೂತಪೂರ್ವ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರುವ 'ಕೃಷ್ಣಂ ಪ್ರಣಯ ಸಖಿ' ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹೊಸತನದಿಂದ ಕೂಡಿದೆ. ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಗೆಲ್ಲುವ ಲಕ್ಷಣಗಳಿವೆ.
'ಕೃಷ್ಣಂ ಪ್ರಣಯ ಸಖಿ', ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಆಗರ್ಭ ಶ್ರೀಮಂತ ಕೃಷ್ಣ ಅಂದ್ರೆ ಗಣೇಶ್ ಅನಾಥಾಶ್ರಮದಲ್ಲಿ ಬೆಳೆಯುವ ಹುಡುಗಿ ಪ್ರಣಯಾ ಅಂದ್ರೆ ಮಾಳವಿಕಾ ನಾಯರ್ ಅವರನ್ನು ಪ್ರೀತಿಸುತ್ತಾರೆ. ಪ್ರಣಯಾರ ಪರಿಸರ ಕಾಳಜಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನೋಡಿದ ಕೃಷ್ಣನಿಗೆ ಮೊದಲ ನೋಟದಲ್ಲೇ ಪ್ರೀತಿಯಾಗುತ್ತದೆ. ಆಗ ಕೃಷ್ಣ ನನ್ನ ಶ್ರೀಮಂತಿಕೆ ತನ್ನ ಪ್ರೀತಿಗೆ ಅಡ್ಡಿ ಬರಬಹುದೆಂದು ತಿಳಿದು, ಸಾಮಾನ್ಯ ಕ್ಯಾಬ್ ಡ್ರೈವರ್‌ನಂತೆ ಆಶ್ರಮದಲ್ಲಿರುವ ಕಾರ್ ಡ್ರೈವರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇಲ್ಲಿಂದ ಕೃಷ್ಣನ ಪಯಣ ಆರಂಭವಾಗುತ್ತದೆ, ಮದುವೆಯಾಗುತ್ತಾ? ಅಥವಾ ಕೃಷ್ಣ ಓರ್ವ ಶ್ರಿಮಂತ ಅನ್ನೋದು ಪ್ರೀತಿಸಿದ ಹುಡುಗಿಗೆ ಗೊತ್ತಾದಾಗ ಏನಾಗುತ್ತದೆ ಅನ್ನೋದೇ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಥ್ರಿಲ್ಲಿಂಗ್ ಕಥೆ.
ಕೃಷ್ಣನಾಗಿ ಗಣೇಶ್ ಸಿನಿಮಾ ಪೂರ್ತಿ ನಕ್ಕು ನಲಿಸಿವುದರ ಜೊತೆಗೆ ತಾವೋರ್ವ ಫ್ಯಾಮಿಲಿ ಆಡಿಯನ್ಸ್ ಹೀರೋ ಅನ್ನೋದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಮಲೆಯಾಳಂ ಹುಡುಗಿಯಾಗಿದ್ದರೂ ಕೂಡ ಮಾಳವಿಕಾ ನಾಯರ್ ನಮ್ಮ ಭಾಷೆಯ ನಟಿಯೆಂದೇ ನೋಡುಗರಿಗೆ ಅನಿಸುತ್ತದೆ. ಇವರ ಜೊತೆ ಜಾನವಿಯಾಗಿ ಶರಣ್ಯ ಶೆಟ್ಟಿ ಬೋಲ್ಡ್ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದಾರೆ.
ಉಳಿದಂತೆ ಶಶಿಕುಮಾರ್, ಶೃತಿ, ಹಿರಿಯ ನಟರಾದ ರಾಮಕೃಷ್ಣ, ಶ್ರೀನಿವಾಸ್ ಮೂರ್ತಿ, ಅವಿನಾಶ್, ಮಾನಸಿ ಸುಧೀರ್, ಸಾಧುಕೋಕಿಲ, ಗಿರೀಶ್ ಶಿವಣ್ಣ, ಕುರಿ ಪ್ರತಾಪ್ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ರಂಗಾಯಣ ರಘು ಅವರು ತೆಲುಗು ಹಾಗೂ ಕನ್ನಡ ಮಿಶ್ರಿತ ಭಾಷೆಯಲ್ಲಿ ಕಚಗುಳಿ ಇಡ್ತಾರೆ.
ದಂಡುಪಾಳ್ಯ ಹಾಗು ಶಿವಂ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಸಿಂಪಲ್ ಕಥೆಯನ್ನು ನಿರೂಪಣೆ ಮಾಡಿರುವ ಶೈಲಿ ಬಹಳ ಚೆನ್ನಾಗಿದೆ. ನಾನ್-ಲೀನಿಯರ್ ಸ್ಟೈಲ್‌ನಲ್ಲಿ ಸ್ಕ್ರೀನ್‌ಪ್ಲೇ ಸಾಗುತ್ತದೆ. ಫಸ್ಟ್ ಹಾಫ್‌ನಲ್ಲಿ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟು, ಸೆಕೆಂಡ್ ಹಾಫ್‌ನಲ್ಲಿ ಎಲ್ಲಾ ಡೌಟ್ಸ್ಗೂ ಉತ್ತರ ಸಿಗುವಂತೆ ಮಾಡ್ತಾರೆ. ಅರ್ಜುನ್ ಜನ್ಯ ಸಂಗೀತ, ವೆಂಕಟ್ ರಾಮ ಪ್ರಸಾದ್ ಛಾಯಾಗ್ರಹಣ ಚಿತ್ರದ ಸ್ಟ್ರೆಂಥ್ ಆಗಿದೆ. ಇದರ ಜೊತೆಗೆ ವಿಜಯ್ ಈಶ್ವರ್ ಮತ್ತು ಎ.ವಿ.ಶಿವ ಸಾಯಿ ಬರೆದಿರುವ ಡೈಲಾಗ್ಸ್ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ.
ಇದನ್ನೂ ಓದಿ: ಸೆನ್ಸಾರ್ ಪರೀಕ್ಷೆಯಲ್ಲಿ 'ಪೌಡರ್' ಪಾಸ್: ಸ್ವಾತಂತ್ರ್ಯ ದಿನದಂದು ಸ್ಪೆಷಲ್ ಪೋಸ್ಟ್ ಶೇರ್ - Powder
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಶರತ್ ಬೋಜರಾಜ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಒಟ್ಟಾರೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಫ್ಯಾಮಿಲಿ ಸಮೇತ ನೋಡಬಹುದಾದ ಚಿತ್ರವಾಗಿದೆ.
ನಟ ಗಣೇಶ್, ನಿರ್ದೇಶಕ ಶ್ರೀನಿವಾಸರಾಜು ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಖುಷಿ ಪಟ್ಟರು. ಅಭಿಮಾನಿಗಳ ಆ ಸಂಭ್ರಮ ನೋಡಿದ ಗಣಿ ಈ ರೀತಿಯ ಕ್ರೌಡ್ ಕಂಡು ತುಂಬಾನೇ ದಿನಗಳಾಗಿತ್ತು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡರು.