ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿರುವ ಸಂಸ್ಥೆ ಕೆಆರ್ಜಿ ಸ್ಟುಡಿಯೋಸ್. ಈ ಸಂಸ್ಥೆ ಈಗ ಹೆಸರಾಂತ ಚಿತ್ರ ನಿರ್ಮಾಣ, ವ್ಯಾಪಾರ ಹಾಗೂ ವಿತರಣಾ ಸಂಸ್ಥೆಯಾಗಿದ್ದು, ಹಲವಾರು ಯಶಸ್ವಿ ಚಿತ್ರಗಳನ್ನು ಕೊಡುಗೆಯಾಗಿ ನೀಡಿದೆ. ಇದೀಗ ಇದೇ ಸಂಸ್ಥೆ ಬೇರೆ ಭಾಷೆಯ ಚಿತ್ರರಂಗಕ್ಕೂ ಕಾಲಿಡುತ್ತಿದೆ.
'ಸೂಫಿಯುಂ ಸುಜಾತಯುಂ', 'ಹೋಮ್', 'ಅಂಗಮಲೇ ಬಾಯ್ಸ್' ನಂತಹ ಯಶಸ್ವಿ ಮಲಯಾಳಂ ಚಿತ್ರಗಳನ್ನು ನೀಡಿರುವ ಫ್ರೈಡೆ ಫಿಲ್ಮ್ ಹೌಸ್ನೊಂದಿಗೆ 'ಪಡಕ್ಕಲಂ' ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್ಜಿ ಕೈ ಜೋಡಿಸಿದೆ. ಈ ಚಿತ್ರಕಥೆಯನ್ನು ಮನು ಸ್ವರಾಜ್ ಬರೆದು ನಿರ್ದೇಶಿಸಲಿದ್ದಾರೆ. ಬೇಸಿಲ್ ಜೋಸೆಫ್ ನಂತಹ ಖ್ಯಾತ ನಿರ್ದೇಶಕರೊಂದಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಖ್ಯಾತಿ ಇವರಿಗಿದೆ.
ಕೆಆರ್ಜಿ ಸ್ಟುಡಿಯೋಸ್ ಮತ್ತು ಫ್ರೈಡೆ ಫಿಲ್ಮ್ ಹೌಸ್ ಸಹಯೋಗದಲ್ಲಿ ಈಗಾಗಲೇ ಮೂಡಿಬಂದಿರುವ 'ಅಬ್ಬಬ್ಬಾ' ಎಂಬ ಹಾಸ್ಯಭರಿತ ಕನ್ನಡ ಚಿತ್ರ, 'ವಾಲಾಟ್ಟಿ' ಎಂಬ ಮಲಯಾಳಂ ಚಿತ್ರದ ಕನ್ನಡ ಡಬ್ಬಿಂಗ್ ಹಾಗೂ ಬಿಡುಗಡೆ ಎಲ್ಲೆಡೆ ಸದ್ದು ಮಾಡಿತ್ತು. ಇನ್ನು ಹೆಸರಾಂತ ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಯಾದ ಟಿ.ವಿ.ಎಫ್ ನೊಂದಿಗೆ 'ಪೌಡರ್' ಎಂಬ ಕನ್ನಡ ಚಿತ್ರವನ್ನು ಎದುರು ನೋಡುತ್ತಿದೆ. ಅಷ್ಟೇ ಅಲ್ಲದೆ, ಬೆಂಗಳೂರು ಡೇಸ್, ಉಸ್ತಾದ್ ಹೊಟೇಲ್ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕೆಆರ್ಜಿ ಸ್ಟುಡಿಯೋಸ್ ಕಾಲಿಡಲಿದೆ.
ಇನ್ನು ಇಂತಹ ಅನೇಕ ನವೀನ ಕಥಾವಸ್ತುವನ್ನು ಚಿತ್ರರಂಗಕ್ಕೆ ಪರಿಚಯಿಸುವ ಮಹೋದ್ದೇಶವನ್ನು ಕೆಆರ್ಜಿ ಸ್ಟುಡಿಯೋಸ್ ಹೊಂದಿದೆ. ಈ ಮೂಲಕ ಕನ್ನಡ ಚಿತ್ರಗಳ ಮಾರ್ಕೆಟಿಂಗ್ ವ್ಯಾಪ್ತಿಯನ್ನು ಹೊರರಾಜ್ಯಗಳಲ್ಲಿ ವಿಸ್ತರಿಸಲು ಹೊರಟಿದೆ. ಸದ್ಯಕ್ಕೆ ಕೆಆರ್ಜಿ ಬ್ಯಾನರ್ನಲ್ಲಿ ಪೌಡರ್, ಉತ್ತರಕಾಂಡ, ಕಿರಿಕೆಟ್ 11, ಕೆ.ಕೆ ಮುಂತಾದ ಚಿತ್ರಗಳು ತಯಾರಾಗುತ್ತಿವೆ.
ಇದನ್ನೂ ಓದಿ: ಕಲಾ ಕ್ಷೇತ್ರದ ಸಾಧಕರಿಗೆ ಗೌರವ: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ