ಮುಂಬೈ: ''ಲಾಪತಾ ಲೇಡೀಸ್'' ಸಿನಿಮಾ ವಿಶ್ವಪ್ರತಿಷ್ಠಿತ ಆಸ್ಕರ್ 2025 ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಅನಿಮಲ್, ಕಲ್ಕಿ 2898 ಎಡಿಯಂತಹ ಬಿಗ್ ಬಜೆಟ್ ಚಿತ್ರಗಳನ್ನು ಹಿಂದಿಕ್ಕಿ ಕಿರಣ್ ರಾವ್ ಅವರ ಲಾಪತಾ ಲೇಡೀಸ್ 2025ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದುಕೊಂಡಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಚಿತ್ರದ ನಿರ್ದೇಶಕಿ ಕಿರಣ್ ರಾವ್ ಇದು ನನ್ನ ಕನಸು ನನಸಾದ ಕ್ಷಣ ಎಂದು ಹೇಳಿದ್ದಾರೆ. ಆಸ್ಕರ್‌ನಲ್ಲಿ ತಮ್ಮ ಚಿತ್ರ ಭಾರತವನ್ನು ಪ್ರತಿನಿಧಿಸಬೇಕೆಂದು ಬಯಸಿದ್ದರು. ಅಂತಿಮವಾಗಿ ನಿರ್ದೇಶಕರ ಕನಸು ನನಸಾಗಿದೆ.
ಕಿರಣ್ ರಾವ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ''ನಮ್ಮ ಲಾಪತಾ ಲೇಡೀಸ್ ಸಿನಿಮಾ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಆಯ್ಕೆಯಾಗಿದೆ ಎಂಬುದನ್ನು ಹೇಳಲು ನನಗೆ ಬಹಳ ಹೆಮ್ಮೆಯಾಗುತ್ತಿದೆ. ದಣಿವರಿಯದೇ ದುಡಿದು ಕಥೆಯನ್ನು ಹಿರಿತೆರೆಯಲ್ಲಿ ತೋರಿಸುವಲ್ಲಿ ಯಶಸ್ವಿಯಾದ ನನ್ನ ಇಡೀ ತಂಡಕ್ಕೆ ಈ ಗೌರವ ಸಲ್ಲುತ್ತದೆ. ಸಿನಿಮಾ ಜನರ ಹೃದಯವನ್ನು ತಲುಪುವ ಮಾಧ್ಯಮವಾಗಿದೆ ಮತ್ತು ಈ ಚಿತ್ರವನ್ನು ಭಾರತದ ಜನರು ಮೆಚ್ಚಿದಂತೆ ಪ್ರಪಂಚದಾದ್ಯಂತದ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆಯ್ಕೆ ಸಮಿತಿ ಮತ್ತು ಈ ಚಿತ್ರವನ್ನು ನಿರ್ಮಿಸಿದ ಎಲ್ಲರಿಗೂ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದ ಅವರು ಚಿತ್ರದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಅಮೀರ್ ಖಾನ್ ಪ್ರೊಡಕ್ಷನ್ ಧನ್ಯವಾದ ಅರ್ಪಣೆ: ''ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಅಮೀರ್ ಖಾನ್ ಪ್ರೊಡಕ್ಷನ್ ಮತ್ತು ಜಿಯೋ ಸ್ಟುಡಿಯೋಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಚಿತ್ರಕ್ಕಾಗಿ ಶ್ರಮಿಸಿದ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಚಿತ್ರಕ್ಕೆ ಇಷ್ಟು ಪ್ರೀತಿ ಮತ್ತು ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟ ಮುಡಿಗೇರಿಸಿಕೊಂಡ ರಿಯಾ ಸಿಂಘಾ - Miss Universe India 2024
ಅನಿಮಲ್, ಕಲ್ಕಿ 2898 ಎಡಿ, ಚಂದು ಚಾಂಪಿಯನ್ ಸೇರಿದಂತೆ ಮೊದಲಾದ 28 ಹಿಟ್ ಚಿತ್ರಗಳೊಂದಿಗೆ ಸ್ಪರ್ಧಿಸಿ ಅಂತಿಮವಾಗಿ ಲಾಪತಾ ಲೇಡೀಸ್ ಆಸ್ಕರ್ಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. ಚಿತ್ರವನ್ನು ಆಸ್ಕರ್ಗೆ ಹಿರಿಯ ಫಿಲ್ಮ್ ಮೇಕರ್ ಜಾಹ್ನು ಬರುವಾ ನೇತೃತ್ವದ ತೀರ್ಪುಗಾರರ ತಂಡ ಆಯ್ಕೆ ಮಾಡಿದೆ.
ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್; ಭಾರತವನ್ನು ಪ್ರತಿನಿಧಿಸಲಿದೆ ''ಲಾಪತಾ ಲೇಡೀಸ್'' - Laapataa Ladies to Oscars 2025
ಲಾಪತಾ ಲೇಡೀಸ್ ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ರವಿ ಕಿಶನ್, ನಿತಾಂಶಿ ಗೋಯೆಲ್, ಪ್ರತಿಭಾ ರತ್ನ ಮತ್ತು ಸ್ಪರ್ಶ ಶ್ರೀವಾಸ್ತವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2010ರ 'ಧೋಬಿ ಘಾಟ್' ನಂತರ ಕಿರಣ್ ರಾವ್ ನಿರ್ದೇಶಿಸಿರುವ ಎರಡನೇ ಪ್ರೊಜೆಕ್ಟ್ ಇದು. ವಿಮರ್ಶಕರ ಮೆಚ್ಚುಗೆಯ ಹೊರತಾಗಿಯೂ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಕೇವಲ 21.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.