ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಏರಿಳಿತಗಳು ಸಹಜ. ಕೆಲವೊಮ್ಮೆ ಅದ್ಧೂರಿ ಮೇಕಿಂಗ್ ಪ್ರೇಕ್ಷಕರ ಮನ ಸೆಳೆದರೆ, ಮತ್ತೊಂದಿಷ್ಟು ಸಮಯ 'ಕಂಟೆಂಟ್' ಕಿಂಗ್ ಆಗಿರುತ್ತದೆ. 'ಸಿನಿಮಾದ ಕಂಟೆಂಟ್' ಗಟ್ಟಿಯಾಗಿದ್ದರೆ ಯಾವುದೇ ಪ್ರಚಾರವಿಲ್ಲದೇ ಅಥವಾ ಕಡಿಮೆ ಪ್ರಚಾರದಲ್ಲಿ ಸಿನಿಮಾವೊಂದು ಸದ್ದು ಮಾಡಬಲ್ಲದು, ಗೆದ್ದು ಬೀಗಬಹುದು. ಈ ಮಾತಿಗೆ ಸ್ಪಷ್ಟ ಉದಾಹರಣೆಯೆಂದರೆ 'ಗಂಟುಮೂಟೆ' ಸಿನಿಮಾ ಖ್ಯಾತಿಯ ರೂಪಾ ರಾವ್ ನಿರ್ಮಾಣದ 'ಕೆಂಡ' ಚಿತ್ರ.
'ಕೆಂಡ' ಶೀರ್ಷಿಕೆಯಿಂದಲೇ ಸಿನಿಪ್ರಿಯರಲ್ಲಿ ಕೌತುಕ ಮೂಡಿಸಿರುವ ಚಿತ್ರ. ರೂಪಾ ರಾವ್ ನಿರ್ಮಾಣದ 'ಕೆಂಡ' ಬಿಡುಗಡೆಗೆ ಸಜ್ಜಾಗಿದೆ. ಸಹದೇವ್ ಕೆಲವಡಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಹೊತ್ತಿನಲ್ಲಿ ವಿದೇಶದಲ್ಲಿ ಪ್ರೀಮಿಯರ್ ಶೋ ಮೂಲಕ 'ಕೆಂಡ' ಸಿನಿಪ್ರಿಯರ ಮನಗೆದ್ದಿದೆ.
ಮಾರ್ಟಿನ್ ಸ್ಕಾರ್ಸೆಸೆ, ಆಂಗ್ ಲೀ, ಜಿಮ್ ಜರ್ಮುಷ್, ಸ್ಟೈಕ್ ಲೀ, ಕೋಯೆನ್ ಬ್ರದರ್ಸ್ ಮುಂತಾದ ಘಟಾನುಘಟಿ ನಿರ್ದೇಶಕರಿಗೆ ತರಬೇತಿ ಕೊಟ್ಟಿರುವ ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ 'ಕೆಂಡ' ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ನೋಡುಗರೆಲ್ಲರ ಕಡೆಯಿಂದ ಸಿಕ್ಕ ಭರಪೂರ ಮೆಚ್ಚುಗೆಯ ಖುಷಿಯಲ್ಲಿ ಚಿತ್ರತಂಡ ತೇಲುತ್ತಿದೆ.
ಹೌದು, ಇದೇ ಮೊದಲ ಬಾರಿಗೆ ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನಗೊಂಡ ಕನ್ನಡ ಚಿತ್ರವಾಗಿ 'ಕೆಂಡ' ದಾಖಲೆ ಬರೆದಿದೆ. ಈ ಹಿಂದೆ ಕನ್ನಡ ಚಿತ್ರರಂಗದ ಹೆಮ್ಮೆಯಂತಿರೋ 'ತಿಥಿ' ಸಿನಿಮಾ ಪ್ರದರ್ಶನಗೊಂಡಿದ್ದ ಸ್ವಿಟ್ಜರ್ಲ್ಯಾಂಡ್ನಲ್ಲಿಯೂ 'ಕೆಂಡ'ದ ಪ್ರೀಮಿಯರ್ ಶೋ ನಡೆದಿದೆ. ಅಲ್ಲಿಯೂ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿ ಕೊಂಡಾಡಿದ್ದಾರೆ.
ಇದನ್ನೂ ಓದಿ: 'ಭೈರವನ ಕೊನೆ ಪಾಠ' ಹೇಳಲು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ: ಶಿವಣ್ಣನಿಗೆ ಹೇಮಂತ್ ಡೈರೆಕ್ಷನ್ - Bhairavana Kone PaaTa
ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಹೀಗೆ ಹೆಚ್ಚಿನ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಈ ಹಿಂದೆ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿಯೂ ಈ ಚಿತ್ರ ಪ್ರದರ್ಶನ ಕಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೀಗ ಪ್ರೀಮಿಯರ್ ಶೋ ಮೂಲಕ 'ಕೆಂಡ'ದ ಪ್ರಭೆ ಸಾಗರದಾಚೆಗೂ ಹಬ್ಬಿಕೊಂಡಿದೆ.
ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸುತ್ತಿದೆ ರೂಪಾ ರಾವ್ ನಿರ್ಮಾಣದ 'ಕೆಂಡ' ಚಿತ್ರ - Kenda Movie
ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪಾ ರಾವ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ 'ಕೆಂಡ' ಶೀಘ್ರದಲ್ಲೇ ತಾಯ್ನಾಡಿನಲ್ಲಿ ತೆರೆ ಕಾಣಲಿದೆ..