ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ನಟ ಕಾರ್ತಿಕ್ ಜಯರಾಮ್ ಬುಧವಾರದಂದು 45ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಜೆ.ಕೆ ಖ್ಯಾತಿಯ ಅಶ್ವಿನಿ ನಕ್ಷತ್ರ ನಟನಿಗೆ ಅಪಾರ ಸಂಖ್ಯೆಯ ಶುಭಾಶಯಗಳ ಸಂದೇಶ ಹರಿದು ಬಂದಿದೆ. ನಟ ಕೂಡ ತಮ್ಮ ಮುಂದಿನ ಸಿನಿಮಾ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಒಂದು ಸಮಯದಲ್ಲಿ ಕನ್ನಡಿಗರ ಮನೆ ಮಾತಾಗಿದ್ದ 'ಅಶ್ವಿನಿ ನಕ್ಷತ್ರ' ಸೀರಿಯಲ್ ಮೂಲಕ ಜನಪ್ರಿಯತೆ ಸಂಪಾದಿಸಿ, ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆ.ಕೆ ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಕಾರ್ತಿಕ್ ಜಯರಾಮ್ ಅವರೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ನಿನ್ನೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
![Karthik Jayaram starrer new movie titled The Veer announced](https://etvbharatimages.akamaized.net/etvbharat/prod-images/02-05-2024/21367298_newsss.jpg)
ಜೆ.ಕೆ ನಟನೆಯ ಹೊಸ ಸಿನಿಮಾಗೆ 'ದಿ ವೀರ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ ಹಾಗೆ, ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ದಿ ವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್, ದಿ ವೀರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ದಿ ವೀರ್ ಸಿನಿಮಾದಲ್ಲಿ ಕಾರ್ತಿಕ್ ಜಯರಾಮ್ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸುತ್ತಿದ್ದು, ರೋಚಿತ್, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಜೆ.ಕೆ ಮಾತು ಬರದವನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಧ್ರುವ ಎಂ.ಬಿ ಸಂಗೀತ ನೀಡುತ್ತಿದ್ದಾರೆ. ಆರ್ಯನ್ ಗೌಡ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದು, ಹರಿ ಸಂತು ಸಾಹಿತ್ಯದ ಹಾಡುಗಳಿವೆ. ಸದ್ಯ ದಿ ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: ಕಾರ್ಮಿಕರ ದಿನಕ್ಕೆ ಡಾಲಿ 'ಕೋಟಿ' ಚಿತ್ರತಂಡದಿಂದ ವಿಶೇಷ ವಿಡಿಯೋ - Kotee
ಕಾರ್ತಿಕ್ ಜಯರಾಮ್ ಕನ್ನಡ ಮಾತ್ರವಲ್ಲದೇ ಇತರ ಭಾಷೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ 'ಸಿಯಾ ಕೆ ರಾಮ್' ಹಿಂದಿ ಸೀರಿಯಲ್ನಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬಿದ್ದರು. ಬಹುಭಾಷೆಗಳ ಕಿರುತೆರೆ, ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಜೆಕೆ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯ. ಸದ್ಯ 'ದಿ ವೀರ್' ಸಿನಿಮಾ ಘೋಷಿಸಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.