ಹುಬ್ಬಳ್ಳಿ (ಧಾರವಾಡ): ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವ ನಟನೆಯ ''ಕರಟಕ ದಮನಕ'' ಇದೇ ಮಾರ್ಚ್ 8ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶ ಯೋಗರಾಜ್ ಭಟ್ ತಿಳಿಸಿದರು.
ನಗರದಲ್ಲಿಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಕ್ಲೈನ್ ಎಂಟರ್ಟೈನ್ಮೆಂಟ್ಸ್ ಮೂಲಕ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ 'ಕರಟಕ ದಮನಕ' ಚಿತ್ರ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ವೀಕ್ಷಿಸಿ ಆಶೀರ್ವದಿಸಬೇಕು. ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ, "ಡೀಗ ಡಿಗರಿ"ಗೆ ಶಿವರಾಜ್ಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ ಎಂದು ತಿಳಿಸಿದರು. ಯೋಗರಾಜ್ ಭಟ್ ಅವರೇ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಊರು ಮತ್ತು ನೀರಿನ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. "ಕರಟಕ ದಮನಕ" ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಬಾರಿ ನೋಡಿದಾಗ ಅವರನ್ನು "ಕರಟಕ ದಮನಕ" ಎನ್ನುತ್ತಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಈ ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ ಅವನ ಊರು, ಆ ಊರಿನಲ್ಲಿ ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ಆ ನೀರು ನೆನಪಾಗುತ್ತದೆ. ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರಾದ ಪ್ರಭುದೇವ ಮತ್ತು ಶಿವರಾಜ್ಕುಮಾರ ನಟಿಸಿದ್ದಾರೆ. ಉತ್ತಮ ಚಿತ್ರವಾಗಿ ಮೂಡಿಬಂದಿದೆ. ಎಲ್ಲರೂ ಸಿನಿಮಾ ನೋಡಿ ಆರ್ಶೀವಾದ ಮಾಡಲು ಕೋರಿಕೊಂಡರು.
ಇದನ್ನೂ ಓದಿ: 'ಕೆರೆಬೇಟೆ' ಚಿತ್ರತಂಡದ ಬಳಿ ಕ್ಷಮೆಯಾಚಿಸಿದ ಸುದೀಪ್: ಸಿನಿಮಾ ಯಶಸ್ಸಿಗೆ ಶುಭಹಾರೈಕೆ
ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ಇಬ್ಬರು ದಿಗ್ಗಜ ಸ್ಟಾರ್ ನಟರು ಇರೋ ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿರುವುದು ಪುಣ್ಯ. ಉತ್ತರ ಕರ್ನಾಟಕದ ಮೂಲ ಹೊಂದಿರುವ ಚಿತ್ರ ಇದಾಗಿದ್ದು, ಉತ್ತಮ ಚಿತ್ರವಾಗಿದೆ. ಎಲ್ಲರೂ ಫ್ಯಾಮಿಲಿಯೊಂದಿಗೆ ಬಂದು ಚಿತ್ರ ನೋಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: 'ಹಾಡೇ ಹಿಂಗೈತೆ, ಸಿನಿಮಾ ಹೆಂಗಿರಬಹುದು?': ಉಪ್ಪಿಯ 'UI' ಟ್ರೋಲ್ ಸಾಂಗ್ಗೆ ಹುಬ್ಬೇರಿಸಿದ ಫ್ಯಾನ್ಸ್