'ಕಾಂತಾರ' ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್ವುಡ್ ಸ್ಟಾರ್ ರಿಷಬ್ ಶೆಟ್ಟಿ. ಈ ಚಿತ್ರ ರಿಷಬ್ಗೆ ಸಕ್ಸಸ್ ತಂದುಕೊಡುವುದರ ಜೊತೆಗೆ ಡಿವೈನ್ ಸ್ಟಾರ್ ಎಂಬ ಹೆಸರು ತಂದುಕೊಟ್ಟಿತು. ಸದ್ಯ ಶೆಟ್ರು ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಹೋಗಿ ಸೆಟ್ಲ್ ಆಗಿದ್ದಾರೆ.
ಕಾಂತಾರ ಅಧ್ಯಾಯ 1ರ ಚಿತ್ರೀಕರಣ ಕುಂದಾಪುರದ ಬಳಿ ನಡೆಯುತ್ತಿದೆ. ಹಾಗಾಗಿ, ಶೆಟ್ರು ಹೆಂಡತಿ - ಮಕ್ಕಳೊಂದಿಗೆ ಊರಿಗೆ ಹೋಗಿದ್ದಾರೆ. ಮಗನನ್ನು ಕೂಡ ತಮ್ಮ ಊರಿನಲ್ಲೇ ಶಾಲೆಗೆ ಸೇರಿಸಿದ್ದಾರೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡುವುದರ ಜೊತೆಗೆ ಅಭಿನಯಿಸುತ್ತಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಹೆಗಲ ಮೇಲೂ ದೊಡ್ಡ ಜವಾಬ್ದಾರಿ ಇರುವುದರಿಂದ, ಸದ್ಯ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ.
ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ಕಾಂತಾರ ಅಧ್ಯಾಯ 1 ಚಿತ್ರಕ್ಕಾಗಿ ಕುಂದಾಪುರ ಬಳಿ ದೊಡ್ಡ ಸ್ಟುಡಿಯೋ ಮಾಡಿ, ಅಲ್ಲಿ ಸೆಟ್‍ಗಳನ್ನು ಹಾಕಿ ಚಿತ್ರೀಕರಣ ಮಾಡುತ್ತಿದ್ದೇವೆ. ಇನ್‍ಡೋರ್, ಔಟ್‍ಡೋರ್ ಶೂಟಿಂಗ್ ಎಲ್ಲವೂ ಅಲ್ಲೇ ನಡೆಯಲಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಒಂದು ಫೈಟ್ ಚಿತ್ರೀಕರಣವಾಗಿದೆ. ಈ ಚಿತ್ರಕ್ಕಾಗಿ 10 ಕೆ.ಜಿ ತೂಕ ಹೆಚ್ಚಿಸಿ, ಆ ನಂತರ 8 ಕೆ.ಜಿ ತೂಕ ಇಳಿಸಿದ್ದೇನೆ. ಚಿತ್ರಕ್ಕಾಗಿ ಕಲರಿಪಯಟ್ಟು ಕಲಿಯುತ್ತಿದ್ದೇನೆ. 100ಕ್ಕೂ ಹೆಚ್ಚು ದಿನಗಳ ಚಿತ್ರೀಕರಣವಾಗಲಿದೆ. ಕನ್ನಡದಲ್ಲಿ ಚಿತ್ರೀಕರಣ ಮಾಡಿ, ಆ ನಂತರ ಬೇರೆಬೇರೆ ಭಾಷೆಗಳಿಗೆ ಡಬ್ ಮಾಡುತ್ತೇನೆ. ಈ ವರ್ಷ ಚಿತ್ರೀಕರಣ ಮುಗಿಯುತ್ತದೆ. ಬಿಡುಗಡೆ ಮುಂದಿನ ವರ್ಷ ಆಗುತ್ತದೆ. ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ನವೇ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ಗೆದ್ದು ಬೀಗಿದ ತಾರೆಯರಿವರು; ಆನ್ಸ್ಕ್ರೀನ್ನಿಂದ ಸಂಸತ್ವರೆಗೆ - ಜನಸೇವೆಗೆ ಸಜ್ಜಾದ ಸೆಲೆಬ್ರಿಟಿಗಳು - Election Results
ಕಾಂತಾರ ಅಧ್ಯಾಯ 1 ಸಿನಿಮಾ ಬೇರೆ ತರಹದ ಕಥೆ. ಅದನ್ನು ಬರೆದು ಮುಗಿಸುವುದಕ್ಕೆ ಒಂದು ವರ್ಷ ಬೇಕಾಯ್ತು. ಕೇವಲ ಬಜೆಟ್ ವಿಷಯವಷ್ಟೇ ಅಲ್ಲ ಅಥವಾ ಈ ಹಿಂದಿನದ್ದಕ್ಕಿಂತ ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂದಲ್ಲ. ಒಟ್ಟಾರೆ ಕಥೆಯೇ ಹಾಗಿದೆ. ಸಾಕಷ್ಟು ಭಾರಿ ತಿದ್ದಿ- ತೀಡುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಕಾಂತಾರ ಮಾಡುವಾಗ ಮೂರ್ನಾಲ್ಕು ತಿಂಗಳಲ್ಲಿ ಬರೆದು ಮುಗಿಸಿಬಿಟ್ವಿ. ಒಂದು ವರ್ಷದಲ್ಲಿ ಚಿತ್ರವೂ ಬಿಡುಗಡೆ ಆಯಿತು. ಕೆಲವೊಮ್ಮೆ ಹಾಗಾಗುತ್ತದೆ. ಈ ಚಿತ್ರದ ವಿಷಯಕ್ಕೆ ಬಂದರೆ, ನನಗೂ ಇದು ಮೊದಲ ಅನುಭವ. ಪ್ರತಿ ವಿಭಾಗದಲ್ಲೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಹಾಗಂತ ಇದು ಒತ್ತಡ ಅಲ್ಲ. ನನ್ನ ಹಿಂದಿನ ಚಿತ್ರಗಳಿಗೆ ಎಷ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದೆನೋ, ಈ ಚಿತ್ರಕ್ಕೂ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕೆ ಜಮೀನು ಮಂಜೂರಾತಿ ವಿಚಾರ: ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿ ವಜಾ - Vishnu Memorial
'ಕಾಂತಾರ ಅಧ್ಯಾಯ 1', ಏಳೆಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ. ಸದ್ಯ ಫಸ್ಟ್ ಲುಕ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯ ಗಮನ ಸೆಳೆದಿರೋ ಕಾಂತಾರ ಅಧ್ಯಾಯ 1 ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.