ಕರ್ನಾಟಕದ ಕುಳ್ಳ ಅಂತಾನೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಇಂದು ಇಹಲೋಕ ತ್ಯಜಿಸಿದ್ದಾರೆ. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ದ್ವಾರಕೀಶ್ ಅವರ ನಿಧನದ ಬಗ್ಗೆ ಅವರ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವಥ್, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ.
1964ರಲ್ಲಿ ವೀರಸಂಕಲ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು.
ಹಾಸ್ಯ ಕಲಾವಿದರಾಗಿ, ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ದ್ವಾರಕೀಶ್ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಅಭಿಮಾನಿಗಳ ಕುಳ್ಳನಾಗಿ ಪ್ರಸಿದ್ಧಿ ಪಡೆದಿದ್ದರು. ಕನ್ನಡದ ಜೊತೆಗೆ ತಮಿಳು, ಹಿಂದಿ ಸಿನಿಮಾಗಳನ್ನೂ ದ್ವಾರಕೀಶ್ ನಿರ್ಮಿಸಿದ್ದಾರೆ. ಚಿತ್ರರಂಗದಲ್ಲಿ ಅವರ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು.
'ಕರ್ನಾಟಕದ ಕುಳ್ಳ' ಎಂದೇ ಕರೆಸಿಕೊಂಡ ಇವರು ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಹಲವು ಸೂಪರ್ ಹಿಟ್ ಸಿನಿಮಾದ ಜೊತೆಗೆ ಸಾಕಷ್ಟು ನಟ, ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ದ್ವಾರಕೀಶ್ ಮತ್ತು ಸಾಹಸಿಂಗ ವಿಷ್ಣುವರ್ಧನ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದು, ಈ ಜೋಡಿ ಪ್ರಸಿದ್ಧವಾಗಿತ್ತು. ಗುರು ಶಿಷ್ಯರು, ಪ್ರಚಂಡ ಕುಳ್ಳ, ಕಳ್ಳಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರದಲ್ಲಿ ರಾಜಕುಳ್ಳ, ನ್ಯಾಯ ಎಲ್ಲಿದೆ, ಅದೃಷ್ಟವಂತ, ಪೆದ್ದ ಗೆದ್ದ, ಆಪ್ತಮಿತ್ರ, ಮುದ್ದಿನ ಮಾವ, ಮಂಕುತಿಮ್ಮ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಪೊಲೀಸ್ ಪಾಪಣ್ಣ, ಬಂಗಾರದ ಮನುಷ್ಯ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ದ್ವಾರಕೀಶ್ ಅದ್ಭುತ ನಟನೆ ಸಿನಿ ರಸಿಕರ ಮನಮುಟ್ಟಿದೆ.
ಇದನ್ನು ಓದಿ: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ - Soundarya Jagadish suicide