ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಆಗಮಿಸಿ ತಮ್ಮ ಮತ ಚಲಾಯಿಸುತ್ತಿದ್ದಾರೆ. ಜೊತೆಗೆ ಎಲ್ಲರೂ ಮತದಾನ ಮಾಡಿ ಎಂದು ಕರೆ ಕೊಟ್ಟಿದ್ದಾರೆ.
ಮತದಾನ ಮಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿ, 'ಪ್ರತಿಯೊಬ್ಬರು ಮತ ಹಾಕಬೇಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ನೀವು ಮತ ಹಾಕಿಲ್ಲ ಅಂದ್ರೆ ಅದು ವ್ಯರ್ಥವಾಗುತ್ತದೆ. ಯುವಕರು ಇನ್ನೂ ಮಲಗಿದ್ದಾರೆ. ಎದ್ದೇಳೋದು ಲೇಟ್. ಎದ್ದೇಳ್ತಾರೆ, ಎದ್ದು ವೋಟ್ ಹಾಕ್ತಾರೆ' (ಬೆಳಗ್ಗೆ ಮಾತನಾಡಿರುವುದು) ಎಂದು ತಿಳಿಸಿದರು.
ಬಿಟಿಎಲ್ ವಿದ್ಯಾವಾಹಿನಿ ಶಾಲೆಯ ಮತಗಟ್ಟೆಗೆ ನಟ - ನಿರ್ದೇಶಕ ಉಪ್ಪಿ ಆಗಮಿಸಿ ತಮ್ಮ ಮತ ಚಲಾಯಿಸಿದರು. ಕತ್ತರಿಗುಪ್ಪೆ ಬಳಿ ಇರುವ ಪೋಲಿಂಗ್ ಬೂತ್ನಲ್ಲಿ ಮತದಾನ ಮಾಡಿದ ಅವರು ಎಲ್ಲರೂ ಮತದಾನ ಮಾಡಿ ಎಂದು ಕರೆ ಕೊಟ್ಟರು. ಇನ್ನೂ ಅತ್ತಿಗುಪ್ಪೆಯ ಕೆವಿವಿ ಶಾಲೆಗೆ ಪ್ರೇಮ್ ಹಾಗೂ ರಕ್ಷಿತಾ ದಂಪತಿ ಆಗಮಿಸಿ ತಮ್ಮ ಮತ ಚಲಾಯಿಸಿದರು.
ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, ಅರಸಿಕೆರೆಯ ಕಾಳೇನಹಳ್ಳಿಯ ಮತಗಟ್ಟೆಗೆ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಎಂದಿನಂತೆ ಈ ಬಾರಿಯೂ ಕುಟುಂಬಸ್ಥರ ಜೊತೆ ಮತದಾನ ಮಾಡಿದರು. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಶೈಲಿಯಲ್ಲಿ ಬಂದು ಹಕ್ಕು ಚಲಾಯಿಸಿದರು.
ಯಲಹಂಕ ಜುಡಿಷಿಯಲ್ ಲೇಔಟ್ನ ಗಾನದೀಪಿಕಾ ಶಾಲೆಯಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತದಾನ ಮಾಡಿದರು. ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ನಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು. ಮತದಾನದ ಬಳಿಕ ಅಭಿಮಾನಿಗಳ ಕೋರಿಕೆ ಮೇರೆಗೆ ನಟಿ ಸೆಲ್ಫಿಗೆ ಪೋಸ್ ಕೊಟ್ಟರು.
ಬಸವೇಶ್ವರ ನಗರದ ವಾಣಿ ಪಬ್ಲಿಕ್ ಸ್ಕೂಲ್ನಲ್ಲಿ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ ಚಲಾಯಿಸಿದ್ದಾರೆ. ಕುಟುಂಬದ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಮತ ಚಲಾಯಿಸಿದ ವಿಷ್ಣುವರ್ಧನ್ ಮೊಮ್ಮಗ: ಮತದಾನಕ್ಕೆ ಭಾರತಿ ವಿಷ್ಣುವರ್ಧನ್ ಕರೆ - Bharathi Vishnuvardhan