ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಸೆಪ್ಟೆಂಬರ್ 29ರಿಂದ ಶುರುವಾಗುತ್ತಿದೆ. ಈ ಬಾರಿ ಸ್ವರ್ಗ ಮತ್ತು ನರಕ ಕಾನ್ಸೆಪ್ಟ್ ಮೇಲೆ ಶೋ ಪ್ರಾರಂಭವಾಗುತ್ತಿರುವುದು ವಿಶೇಷ. ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್, ವಯೋಕಾಮ್ ಎಂಟರ್ಟೈನ್ಮೆಂಟ್ನ ಪ್ರೆಸಿಡೆಂಟ್ ಅಲೋಕ್ ಜೈನ್ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯ್ಕ ಅವರು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸೋಮವಾರ ಈ ಕುರಿತು ಮಾಹಿತಿ ಹಂಚಿಕೊಂಡರು.
ಕಿಚ್ಚ ಸುದೀಪ್ ಮಾತನಾಡಿ, "ಬಿಗ್ ಬಾಸ್ ಶೋನಿಂದ ನನಗೆ ಸ್ವಲ್ಪ ಗ್ಯಾಪ್ ಬೇಕು ಅಂದುಕೊಂಡಿದ್ದೆ. ಆ ಕಾರಣಕ್ಕೆ ಈ ಬಾರಿ ನಾನು ಶೋ ಮಾಡೋದು ಡೌಟ್ ಎಂದು ಹೇಳಿದ್ದೆ. ಪಬ್ಲಿಸಿಟಿಗೋಸ್ಕರ ನಾವು ಪ್ರೋಮೋ ಬಿಟ್ಟಿಲ್ಲ. ಈ ಹಿಂದೆ ಹೇಳಿದ ಹಾಗೆಯೇ ಈ ಶೋವನ್ನು ಬೇರೆಯವರಿಂದ ಮಾಡಿಸಿ ಅಂತಾ ಹೇಳಿದ್ದೆ. ಆದರೆ ಬಿಗ್ ಬಾಸ್ ಟೀಂ ಹಾಗೂ ಎಂಡಮೋಲ್ನ ಸಾಕಷ್ಟು ಜನ ಬಂದು ಕಾರ್ಯಕ್ರಮ ನಡೆಸಿಕೊಡುವಂತೆ ಒತ್ತಾಯಿಸಿದರು. ಹಾಗಾಗಿ ಕಾರ್ಯಕ್ರಮ ನಡೆಸುವುದಕ್ಕೆ ಒಪ್ಪಬೇಕಾಯಿತು" ಎಂದರು.
"ಬಿಗ್ ಬಾಸ್ ಶೋನಿಂದ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಿಗ್ ಬಾಸ್ ಅಂದ್ರೆ ಒಂದು ಅದ್ಭುತವಾದ ಕಾರ್ಯಕ್ರಮ ಹಾಗೂ ವೇದಿಕೆ. ನಾಲ್ಕು ದಿನಗಳ ಮಟ್ಟಿಗೆ ನಾನೆಲ್ಲಿಗಾದರೂ ಹೋಗಬಹುದು. ಶುಕ್ರವಾರ ಎಲ್ಲೇ ಇದ್ದರೂ ವಾಪಸ್ ಬಂದು ಎಲ್ಲ ಎಪಿಸೋಡ್‍ಗಳನ್ನು ನೋಡಿ, ಶನಿವಾರ ರಾತ್ರಿಯಿಂದ ಶೂಟಿಂಗ್ ಶುರುವಾದ್ರೆ ಅದು ಮುಗಿಯೋದು ಒಂದೊಂದು ಸಲ ಬೆಳಗ್ಗೆ ಆಗಿರುತ್ತೆ. ಇನ್ನು ಈ ಶೋಗೆ ವಿಭಿನ್ನ ರೀತಿಯ ಸ್ಪರ್ಧಿಗಳು ಬರ್ತಾರೆ. ಆನ್ ಲೈವ್ನಲ್ಲಿ ಯಾವುದು ಸರಿ? ಯಾವುದು ತಪ್ಪು ಅನ್ನೋದನ್ನು ಹೇಳಬೇಕು, ಅದು ಯಾರ ಮನಸ್ಸಿಗೂ ನೋವಾಗದಂತೆ ಹ್ಯಾಂಡಲ್ ಮಾಡಬೇಕು. ಕೆಲವೊಂದು ಬಾರಿ ನನಗೆ ಒಂದು ಚಾಲೆಂಜಿಂಗ್ ಆಗಿರುತ್ತೆ" ಎಂದು ತಿಳಿಸಿದರು.
ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯ್ಕ ಮಾತನಾಡಿ, "ಈ ಬಾರಿ ಕೆಲವು ಸ್ಪರ್ಧಿಗಳನ್ನು ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಯ ಮಾಡಲ್ಲ. ಈ ಶನಿವಾರ ಪ್ರಸಾರವಾಗುವ ರಾಜಾ ರಾಣಿ ವೇದಿಯ ಮೇಲೆ ಪರಿಚಯಿಸುತ್ತೇವೆ. ಸಾರ್ವಜನಿಕರಿಗೂ ವೋಟ್ ಮಾಡುವ ಅವಕಾಶ ಸಿಗುತ್ತದೆ. ಬಿಗ್ ಬಾಸ್ ಮನೆ ಹಾಗೂ ಕೆಲವು ಆಟಗಳು ಹೊಸದಾಗಿರುತ್ತವೆ" ಎಂದು ಹೇಳಿದರು.
ಇನ್ನು, ಬಿಗ್ ಬಾಸ್ ಶೋಗೆ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಸುದೀಪ್ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. "ನಾನು ನನ್ನ ತಟ್ಟೆ ಎಷ್ಟು ದೊಡ್ಡದಾಗಿದೆಯೇ ಅಷ್ಟೇ ತಿನ್ನೋದು, ನನ್ನ ಯೋಗ್ಯತೆ ಎಷ್ಟಿದೆಯೋ ಅಷ್ಟೇ ದುಡಿಯೋದು" ಎಂದು ಉತ್ತರಿಸಿದರು. "ಈಗ ನನ್ನ ಯೋಗ್ಯತೆಯನ್ನು ನೀವು ಹೇಳಿ" ಎಂದು ಸುದೀಪ್ ಪ್ರಶ್ನಿಸಿದರು. "ಇದು 11ನೇ ಸೀಸನ್, ಅಷ್ಟೇ ಡಿಮ್ಯಾಂಡ್ ಇರಬೇಕಲ್ವ?" ಎಂದರು.
ಬಿಗ್ ಬಾಸ್ ಕಾರ್ಯಕ್ರಮದ ಸ್ಪೆಷಲ್ ಪಾರ್ಟ್ನರ್ನಲ್ಲಿ A23 ರಮ್ಮಿ ಆಟದ ಕುರಿತ ಪ್ರಶ್ನೆಗೆ ಉತ್ತರಿಸಿದ ಸುದೀಪ್, "ತಿಳುವಳಿಕೆ ಇರುವ ಸಮಾಜ ನಮ್ದು. ಇಲ್ಲಿ ಕುಡಿತ, ಸಿಗರೇಟ್ ಎಲ್ಲವೂ ಇದೆ. ಮನೆಯಲ್ಲಿ ಅಪ್ಪ, ಅಮ್ಮನೂ ಇದ್ದಾರೆ. ನಾವು ನಮಗೇನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಸಮಾಜದಲ್ಲಿ ಸರ್ಕಾರ ತೆಗೆದುಕೊಳ್ಳುವ ತೆರಿಗೆ ಬಗ್ಗೆಯೂ ನಮಗೆ ಈ ರೀತಿ ಪ್ರಶ್ನೆ ಮೂಡುತ್ತೆ. ಯಾಕೆ ಇಷ್ಟೊಂದು ತೆರಿಗೆ ತೆಗೆದುಕೊಳ್ತಾರೆ ಅನಿಸುತ್ತೆ. ಸರ್ಕಾರ ನಡೆಸಲು ಅವರಿಗೂ ಹಣದ ಅವಶ್ಯಕತೆ ಇರುತ್ತೆ. ಹಾಗೆಯೇ ಕಾರ್ಯಕ್ರಮಗಳೂ ಕೂಡ. ಪ್ರಯೋಜಕರು ಕೂಡ ಅಷ್ಟೇ ಮುಖ್ಯವಾಗ್ತಾರೆ" ಎಂದು ಉತ್ತರಿಸಿದರು.