'ಕಂಗುವ', ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಸೂರ್ಯ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಟೈಟಲ್, ಪೋಸ್ಟರ್, ಕಾಸ್ಟ್, ಟ್ರೇಲರ್ ಹಾಗೂ ಹಾಡುಗಳಿಂದಲೇ ದೊಡ್ಡ ಮುಟ್ಟದ ಕ್ರೇಜ್ ಹುಟ್ಟಿಸಿರೋ ಕಂಗುವ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲದೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬರೋಬ್ಬರಿ 10,000 ಸಾವಿರ ಸ್ಕ್ರೀನ್ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲು ರೆಡಿಯಾಗಿದೆ.
ಸದ್ಯ ಸಿನಿಮಾ ಪ್ರಮೋಶನ್ನಲ್ಲಿ ಸಖತ್ ಬ್ಯುಸಿಯಾಗಿರುವ ಸೂರ್ಯ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಕನ್ನಡದಲ್ಲಿಯೂ ಕಂಗುವ ಬಿಡುಗಡೆ ಆಗುತ್ತಿದೆ. ಹಾಗಾಗಿ, ಸೂರ್ಯ ಅವರಿಂದು ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಫ್ಯಾನ್ಸ್ ಮೀಟ್ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಬೆಂಗಳೂರಿನ ಓರಾಯನ್ ಮಾಲ್ನಲ್ಲಿ ಕಂಗುವ ಚಿತ್ರತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ನಾಯಕ ನಟ ಸೂರ್ಯ ಹಾಗೂ ಈ ಚಿತ್ರವನ್ನು ಕರ್ನಾಟಕದಲ್ಲಿ ವಿರತಣೆ ಮಾಡುವ ಹೊಣೆ ಹೊತ್ತಿರುವ ಕೆವಿಎನ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ತಮ್ಮ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದರು.
ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆಯಾಚಿಸಿದ ನಟ: ನಟ ಸೂರ್ಯ ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಮಾಧ್ಯಮಗಳ ಮುಂದೆ ಕ್ಷಮೆ ಕೇಳುತ್ತಾ, ಕಂಗುವ ಪತ್ರಿಕಾಗೋಷ್ಠಿ ಶುರು ಮಾಡಿದರು. ''ಈ ಚಿತ್ರ ನಿಮಗೆ ನಿರಾಸೆ ಮಾಡೋದಿಲ್ಲ. ಏಕಂದರೆ, 1,000 ಅಥವಾ 500 ಸಾವಿರ ವರ್ಷಗಳ ಹಿಂದಿನ ಪ್ರಪಂಚಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಪ್ಯಾನ್ ಇಂಡಿಯಾ ಸಂಸ್ಕೃತಿ ರಾಜಮೌಳಿ ಸರ್ನಿಂದ ಶುರುವಾಯಿತು. ಜೊತೆಗೆ ಕೆಜಿಎಫ್, ಕಾಂತಾರ ಸಿನಿಮಾಗಳು ಪ್ಯಾನ್ ಇಂಡಿಯಾ ಜನರು ನೋಡುವಂತೆ ಮಾಡಿತು. ಒಳ್ಳೆ ಕಂಟೆಂಟ್ ಇದ್ದಾಗ ಆ ಸಿನಿಮಾವನ್ನು ಜನರು ಒಪ್ಪಿಕೊಳ್ಳುತ್ತಾರೆ. ಆ ರೀತಿಯ ಕಂಟೆಂಟ್ ಕಂಗುವದಲ್ಲಿದೆ. ಈ ಚಿತ್ರ ನಿಜವಾಗಿಯೂ ಪ್ರೇಕ್ಷಕರಿಗೆ ಹಿಡಿಸಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ಸಾವಿರ ವರ್ಷಗಳ ಕಾಡು ಜನರ ಕಥೆ: ''ಕಂಗುವ ಸಿನಿಮಾ 1,000 ಸಾವಿರ ವರ್ಷಗಳ ಕಾಡು ಜನರ ಕಥೆಯನ್ನು ಹೇಳುತ್ತದೆ. ಕಂಗುವ ಫೈಟರ್ ಅಲ್ಲ ಅವನು ವಾರಿಯರ್. ಈ ಸಿನಿಮಾಗೆ ಸಂಪೂರ್ಣ ಎಫರ್ಟ್ ಹಾಕಿದ್ದೇನೆ. ನಿರ್ದೇಶಕ ಶಿವ ಅವರಿಂದ ಹಿಡಿದು ಪ್ರತಿಯೊಬ್ಬ ತಂತ್ರಜ್ಞರ ಶ್ರಮ ಇಲ್ಲಿದೆ. ಕೇವಲ ಆ್ಯಕ್ಷನ್ ಸಿಕ್ವೇನ್ಸ್ಗಳಿಲ್ಲ, ಕ್ಲೈಮ್ಯಾಕ್ಸ್ವರೆಗೂ ಚಿತ್ರದಲ್ಲಿ ಎಮೋಷನ್ ಇದೆ. ಅದು ನನಗೆ ಬಹಳ ಇಷ್ಟ'' ಎಂದರು.
''ನನಗೆ ಬೆಂಗಳೂರು ಅಂದಾಕ್ಷಣ ಕಣ್ಮುಂದೆ ಬರೋದು ನನ್ನ ಸಿನಿಮಾಗಳನ್ನು ಅಭಿಮಾನಿಗಳು ಫೆಸ್ಟಿವಲ್ನಂತೆ ಸೆಲಬ್ರೇಟ್ ಮಾಡೋದು. ನನಗದೇ ಮೊದಲ ಸಂಪಾದನೆ. ಆಮೇಲೆ ಸಿನಿಮಾ ಕಲೆಕ್ಷನ್. ಏಕಂದ್ರೆ ಬೆಂಗಳೂರು ಒಂದು ಮೆಟ್ರೋಪಾಲಿಟನ್ ಸಿಟಿ. ಇಲ್ಲಿ ಎಲ್ಲಾ ಭಾಷೆಯ ಜನರಿದ್ದಾರೆ. ಹಾಗಾಗಿ ಎಲ್ಲಾ ಭಾಷೆಯ ಜನರು ಸಿನಿಮಾಗಳನ್ನು ನೋಡುತ್ತಾರೆ. ಕಂಗುವ ಸಿನಿಮಾಗೂ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ ಎಂಬ ನಂಬಿಕೆ ಇದೆ'' ಎಂದು ತಿಳಿಸಿದರು.
ಇದನ್ನೂ ಓದಿ: 'ಬಿಗ್ ಬಾಸ್ ನನ್ನಮ್ಮನ ಅಚ್ಚುಮೆಚ್ಚಿನ ಕಾರ್ಯಕ್ರಮ': ಸುದೀಪ್ ಭಾವುಕ, ಧೈರ್ಯ ತುಂಬಿದ ಸರ್ವರಿಗೂ ಧನ್ಯವಾದ
ನವೆಂಬರ್ 15ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗುತ್ತಿದೆ. ನವೆಂಬರ್ 14ಕ್ಕೆ ನಿಮ್ಮ ಕಂಗುವ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದೀರಿ. ಶಿವಣ್ಣದು ಚಿಕ್ಕ ಸಿನಿಮಾ ಎಂಬ ಲೆಕ್ಕಾಚಾರದಲ್ಲಿ ಬಿಡುಗಡೆ ಮಾಡುತ್ತಿದ್ದೀರೇ? ಎಂಬ ಪ್ರಶ್ನೆ ಸೂರ್ಯ ಅವರಿಗೆ ಮಾಧ್ಯದವರಿಂದ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ನಟ, ಹಾಗೇನೂ ಇಲ್ಲ. ಶಿವಣ್ಣ ನನ್ನ ಪ್ರೀತಿಯ ಬಿಗ್ ಬ್ರದರ್ ಇದ್ದಂತೆ. ಹಬ್ಬಗಳ ಸಮಯ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತವೆ. ಆ ನಿಟ್ಟಿನಲ್ಲಿ ನಾವು ಕಂಗುವ ರಿಲೀಸ್ ಮಾಡುತ್ತಿದ್ದೇವೆ. ತಮಿಳುನಾಡಿನಲ್ಲಿ ಶಿವಣ್ಣ ಸಿನಿಮಾಗಳಿಗೆ ಹೆಚ್ಚು ಚಿತ್ರಮಂದಿಗಳು ಸಿಗುವಂತೆ ನನ್ನ ವಿತರಕ ಹತ್ತಿರ ಮಾತನಾಡುತ್ತೇನೆ. ಅವರ ಸಿನಿಮಾಗೆ ಹೆಚ್ಚು ಥಿಯೇಟರ್ಗಳು ಸಿಗುವಂತೆ ಮಾಡುತ್ತೇನೆಂದು ಸೂರ್ಯ ಹೇಳಿದರು.
ಇದನ್ನೂ ಓದಿ: 'ಬಘೀರ' ಕಲೆಕ್ಷನ್: ಸಿನಿಪ್ರಿಯರಿಂದ ಶ್ರೀಮುರಳಿ, ರುಕ್ಮಿಣಿ ವಸಂತ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್
ಕನ್ನಡ ಅಲ್ಲದೇ ಪರಭಾಷೆಯಲ್ಲಿ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಮಾಡುತ್ತಿರುವ ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಅವರು ಸದ್ಯ ತಮಿಳಿನಲ್ಲಿ ವಿಜಯ್ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಟ ಸೂರ್ಯ ಅವರ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಹೇಳಿದರು. ರೋಲೆಕ್ಸ್ ಅಂತಹ ಪಾತ್ರದಲ್ಲಿ ಅಬ್ಬರಿಸಿರುವ ಸೂರ್ಯ ಅವರಿಗೆ ಸಿನಿಮಾ ಮಾಡುವುದಿಲ್ಲ ಅಂತಾ ಹೇಳೋದಿಕ್ಕೆ ಆಗೋದಿಲ್ಲ. ಹಾಗಾಗಿ ಸೂರ್ಯ ಅವರ ಜೊತೆ ಸಿನಿಮಾ ಮಾಡೋದು ಪಕ್ಕಾ ಎಂದು ಭರವಸೆ ಕೊಟ್ಟರು.
ಸೂರ್ಯ ಅವರ ಸಿನಿ ಕೆರಿಯರ್‌ನಲ್ಲಿ ಇದೊಂದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಬಿ ಡಿಯೋಲ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಶಿವ ನಿರ್ದೇಶನದ ಈ ಚಿತ್ರ ನವೆಂಬರ್ 14ರಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಆಗಲಿದೆ.