ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ನಿನ್ನೆ (ಸೋಮವಾರ) ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಭಂಬ್ಲಾ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯರೊಂದಿಗೆ ಅವರು ಹೋಳಿ ಸಂಭ್ರಮಾಚರಿಸಿದರು. ಇದರ ಬೆನ್ನಲ್ಲೇ ಕೆಲವು ವಿವಾದಗಳು ನಟಿಯನ್ನು ಸುತ್ತಿಕೊಂಡಿವೆ.
2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ, ನಟಿ ಹಾಗೂ ರಾಜಕೀಯ ಮುಖಂಡೆಯಾಗಿ ಗುರುತಿಸಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ಅವರನ್ನು 'ಸಾಫ್ಟ್ ಪಾರ್ನ್ ಸ್ಟಾರ್' ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಮಹಿಳೆಯರ ಘನತೆ ಬಗ್ಗೆ ದನಿ ಎತ್ತಿರುವ ಕಂಗನಾರ ಈ ಹಳೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾರ್ವಜನಿಕ ವೇದಿಕೆಯಲ್ಲಿ ನಟಿ ಕೊಟ್ಟ ಹೇಳಿಕೆಗಳು ವಿವಿಧ ಪ್ರತಿಕ್ರಿಯೆ ಪಡೆಯುತ್ತಿವೆ.
ಕಂಗನಾ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಂಗನಾ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರ ಇನ್‌ಸ್ಟಾಗ್ರಾಮ್ ಅಕೌಂಟ್ನಲ್ಲಿ ಲೈಂಗಿಕ ನಿಂದನೆಗಳಿಂದ ಕೂಡಿದ ಆಕ್ಷೇಪಾರ್ಹ ಪೋಸ್ಟ್ ಕಾಣಿಸಿಕೊಂಡಿದ್ದು, ವಿವಾದದ ಕಿಡಿ ಹೊತ್ತಿಕೊಂಡಿದೆ. ಈ ಪೋಸ್ಟ್ ಕಂಗನಾರ ಬೋಲ್ಡ್ ಫೋಟೋ ಮತ್ತು ಅವಹೇಳನಾಕಾರಿ ಕ್ಯಾಪ್ಷನ್ ಒಳಗೊಂಡಿದೆ.
ಕಂಗನಾ ಪ್ರತಿಕ್ರಿಯೆ: ಸುಪ್ರಿಯಾ ಶ್ರಿನಾಟೆ ಅವರ ಹೆಸರಿನ ಅಕೌಂಟ್ನಿಂದ ಪೋಸ್ಟ್ ಶೇರ್ ಆದ ಬೆನ್ನಲ್ಲೇ, ಬಿಜೆಪಿ ಅಭ್ಯರ್ಥಿ ಕಂಗನಾ ಕೂಡ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಪ್ರತೀ ಮಹಿಳೆಯೂ ಘನತೆಗೆ ಅರ್ಹಳು" ಎಂದಿದ್ದಾರೆ.
'ಅಕೌಂಟ್ ಹ್ಯಾಕ್ ಆಗಿದೆ': ಮತ್ತೊಂದೆಡೆ, ಸುಪ್ರಿಯಾ ಶ್ರಿನಾಟೆ ತಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂದು ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಜೊತೆಗೆ ಆ ಆಕ್ಷೇಪಾರ್ಹ ಹೇಳಿಕೆಗಳ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದಾಗ್ಯೂ, ಬಿಜೆಪಿ ಟೀಕಾಸಮರ ನಡೆಸಿದೆ.
ಕಂಗನಾರ ಹಳೇ ವಿಡಿಯೋ ವೈರಲ್: ವಿವಾದ ಅಲ್ಲಿಗೇ ನಿಲ್ಲಲಿಲ್ಲ. ನೆಟ್ಟಿಗರು ಮತ್ತಷ್ಟು ಹಳೇಯ ವಿಚಾರಗಳನ್ನು ಹೊರತೆಗೆದಿದ್ದಾರೆ. 2020ರಿಂದ ಬಂಂದಿರುವ ಸಂದರ್ಶಗಳ ತುಣುಕುಗಳನ್ನು ವೈರಲ್ ಮಾಡಿದ್ದಾರೆ. ಆ ವಿಡಿಯೋಗಳಲ್ಲಿ ಕಂಗನಾ ಅವರು ಊರ್ಮಿಳಾ ಮಾತೋಂಡ್ಕರ್ ಅವರ ಮೇಲೆ ಇದೇ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಹಳೇ ಸಂದರ್ಶನದಲ್ಲಿ ಕಂಗನಾ, ಊರ್ಮಿಳಾ ಅವರ ನಟನಾ ವೃತ್ತಿಯನ್ನು ಅವಹೇಳನ ಮಾಡಿದ್ದರು. ಅವರನ್ನು "ಸಾಫ್ಟ್ ಪೋರ್ನ್ ಸ್ಟಾರ್" ಎಂದು ಮೂದಲಿಸಿದ್ದರು. ಅವರ ಸಾಧನೆಗಳನ್ನೂ ಪ್ರಶ್ನಿಸಿದ್ದರು.
ಇದನ್ನೂ ಓದಿ: ಮಂಡಿಯಿಂದ ಕಂಗನಾ ರಣಾವತ್ ಸ್ಪರ್ಧೆ: ಕ್ಷೇತ್ರದ ಜನರೊಂದಿಗೆ ಹೋಳಿ ಆಚರಿಸಿದ ನಟಿ - kangana ranaut
ಊರ್ಮಿಳಾ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಕೀಯ ರಂಗ ಪ್ರವೇಶಿಸಿದ್ದರು. 2020ರಲ್ಲಿ ಶಿವಸೇನೆ ಸೇರ್ಪಡೆಯಾಗಿದ್ದರು. ಕಂಗನಾ ಅವರ ಹೇಳಿಕೆಗಳನ್ನು ವಿರೋಧಿಸಿದ್ದರು. ಕಂಗನಾರ ಕಾಮೆಂಟ್‌ಗಳಿಗೆ ಬಾಲಿವುಡ್ನಿಂದಲೂ ಛೀಮಾರಿ ಬಿದ್ದಿತ್ತು. ಸ್ವರಾ ಭಾಸ್ಕರ್, ಅನುಭವ್ ಸಿನ್ಹಾ ಮತ್ತು ಫರಾ ಖಾನ್ ಅಲಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಂಗನಾರ ಹೇಳಿಕೆ ಖಂಡಿಸಿ ಊರ್ಮಿಳಾ ಜೊತೆ ದನಿಗೂಡಿಸಿದ್ದರು.
ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ವಿಭಿನ್ನ ಪಾತ್ರದಲ್ಲಿ ಬರ್ತಿದ್ದಾರೆ ಚಂದನ್ ಶೆಟ್ಟಿ - Chandan Shetty
ಇನ್ನು ಕಂಗನಾ-ಸುಪ್ರಿಯಾ ವಿವಾದಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕಾಂಗ್ರೆಸ್ ಸದಸ್ಯರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಸುಪ್ರಿಯಾ ಅಲ್ಲದೇ ಕಿಸಾನ್ ಕಾಂಗ್ರೆಸ್‌ನ ಹೆಚ್‌ಎಸ್ ಅಹಿರ್ ಕೂಡ ಕಂಗನಾ ಬಗ್ಗೆ ಅಗೌರವದ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂಬ ಆರೋಪಗಳಿವೆ.