'ಕಲ್ಕಿ 2898 ಎಡಿ' ಭಾರತೀಯ ಚಿತ್ರರಂಗದ 2024ರ ಬಹುನಿರೀಕ್ಷಿತ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಮೇಕಿಂಗ್‌ನಿಂದಲೇ ಹೈಪ್ ಕ್ರಿಯೇಟ್ ಮಾಡಿದೆ. ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡುತ್ತಿರುವ ಬಹು ತಾರಾಗಣದ ಸಿನಿಮಾಗೆ ಬ್ಲಾಕ್ಬಸ್ಟರ್ ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ.
ಹೌದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಈ 'ಕಲ್ಕಿ' ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ 'ಬುಜ್ಜಿ' ವಾಹನವನ್ನು ಡಿವೈನ್ ಸ್ಟಾರ್ ರೈಡ್ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಶೆಟ್ರ ಬುಜ್ಜಿ ರೈಡ್ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಭೈರವನ ಆಪ್ತ ಬುಜ್ಜಿ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ ಕಂಪನಿಯ ಆನಂದ್ ಮಹೀಂದ್ರ ಸಹ ಇತ್ತೀಚೆಗಷ್ಟೇ ಈ ವಾಹನ ಏರಿದ್ದರು. ಇದೀಗ ಇದೇ ವಾಹನ ಕುಂದಾಪುರಕ್ಕೆ ಬಂದಿದೆ. ಸದ್ಯ ಕಾಂತಾರ ಅಧ್ಯಾಯ 1 ಚಿತ್ರದ ಶೂಟಿಂಗ್ ಸಲುವಾಗಿ ಕುಂದಾಪುರದಲ್ಲಿರುವ ರಿಷಬ್ ಶೆಟ್ಟಿ ಅವರು ಸ್ಟೈಲಿಶ್ ಲುಕ್‌ನಲ್ಲಿ ಬುಜ್ಜಿಯನ್ನು ರೈಡ್ ಮಾಡಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು 'ಕಲ್ಕಿ' ನಿರ್ಮಿಸಿರುವ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ತನ್ನ ಅಧಿಕೃತ ಟ್ವಿಟರ್ ಪೇಜ್ನಲ್ಲಿ ಶೇರ್ ಮಾಡಿದ್ದು, 'ಕಲ್ಕಿ X ಕಾಂತಾರ' ಎಂಬ ಕ್ಯಾಪ್ಷನ್ ನೀಡಿದ್ದಾರೆ. ರಿಷಬ್ ಶೆಟ್ಟಿ ಕೂಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, 'ಕಲ್ಕಿ X ಕಾಂತಾರ' ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್, ಟೀಸರ್, ಗ್ಲಿಂಪ್ಸ್, ಟ್ರೇಲರ್ಗಳು ಸಾಕಷ್ಟು ಸದ್ದು ಮಾಡುತ್ತಿದೆ. ಈ ತುಣುಕುಗಳಲ್ಲಿ ವಿಭಿನ್ನ ಬಗೆಯ ಪ್ರಪಂಚವನ್ನೇ ತೋರಿಸಿದ್ದಾರೆ ನಿರ್ದೇಶಕರು. ಕಾಶಿಯನ್ನು ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ಅದರ ಉಳಿವಿಗಾಗಿ ನಡೆಯುವ ಹೋರಾಟವಿದು. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ, ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್. ಅತ್ಯುತ್ತಮ ಹಿನ್ನೆಲೆ ಸಂಗೀತ, ಹೈ ಕ್ಲಾಸ್ ವಿಎಫ್ಎಕ್ಸ್ ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ ಈ ಸಿನಿಮಾ ಮೂಡಿಬಂದಿದೆ ಎಂಬ ಭರವಸೆಯಿದೆ.
ಇದನ್ನೂ ಓದಿ: ಆರಾಧನಾ ಜೊತೆಗೆ ರ‍್ಯಾಂಪ್ ವಾಕ್ ಮಾಡಿದ 'ಗೌರಿ' ಚಿತ್ರದ ನಟ ಸಮರ್ಜಿತ್ ಲಂಕೇಶ್ - Ramp Walk
ಕಲ್ಕಿ 2898 ಎಡಿ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ ಸಿನಿಮಾ ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯನ್ನೊಳಗೊಂಡಿದ್ದು, ಜೂನ್ 27ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗಪ್ಪಳಿಸಲಿರುವ ಈ ಚಿತ್ರ ವೀಕ್ಷಿಸಲು ಅಪಾರ ಸಂಖ್ಯೆ ಸಿನಿಪ್ರಿಯರು ಕಾತರರಾಗಿದ್ದಾರೆ.
ಇದನ್ನೂ ಓದಿ: 'ಕಲ್ಕಿ 2898 ಎಡಿ' ಸ್ಪೆಷಲ್ ಶೋಗೆ ತೆಲಂಗಾಣ ಸರ್ಕಾರ ಅನುಮತಿ: ಟಿಕೆಟ್ ದರದಲ್ಲಿ ಹೆಚ್ಚಳ! - Kalki Special Show