ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ' ಸಿನಿಮಾ ನಿರ್ಮಾಪಕರು ಇತ್ತೀಚೆಗೆ ತಮ್ಮ ಚಿತ್ರದ ಬಿಗ್ ಅಪ್ಡೇಟ್ ಕೊಡುವುದಾಗಿ ತಿಳಿಸುವ ಮುಖೇನ ಅಪಾರ ಸಂಖ್ಯೆಯ ಅಭಿಮಾನಿಗಳ ಕುತೂಹಲ ಕೆರಳಿಸಿದ್ದರು. ಚಿತ್ರತಂಡ ಭರವಸೆ ನೀಡಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ನಿರೀಕ್ಷೆಯಂತೆ ಚಿತ್ರದ ಹೊಸ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಹಿಂದೆ ಮೇ 9ರಂದು 'ಕಲ್ಕಿ 2898 ಎಡಿ' ಬಿಗ್ ಸ್ಕ್ರೀನ್ ಮೇಲೆ ಬರಲಿದೆ ಎಂದು ಹೇಳಲಾಗಿತ್ತು. ಆದ್ರೆ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಜೂನ್ ಕೊನೆ ವಾರ ಚಿತ್ರಮಂದಿರ ಪ್ರವೇಶಿಸಲಿದೆ.
'ಮಹಾನಟಿ' ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದ ಈ ಚಿತ್ರದ ಮೇಲೆ ಸಿನಿಪ್ರಿಯರು ಮಾತ್ರವಲ್ಲದೇ ಚಿತ್ರರಂಗದವರೂ ಸಹ ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಹೀಗಿರುವಾಗಲೇ ಸಿನಿಮಾದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈವರೆಗೂ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಕೋಟ್ಯಂತರ ಪ್ರೇಕ್ಷಕರಲ್ಲಿತ್ತು. ಅದಕ್ಕೀಗ ಅಧಿಕೃತ ಉತ್ತರ ಸಿಕ್ಕಿದೆ. ಜೂನ್ ಕೊನೆ ವಾರ ಸಿನಿಮಾ ವೀಕ್ಷಕರಿಗೆ ದರ್ಶನ ಕೊಡಲಿದ್ದು, ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದೊಂದು ಸೈನ್ಸ್ ಫಿಕ್ಷನ್ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಚಿತ್ರದಿಂದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಲುಕ್ ಅನಾವರಣಗೊಳಿಸಿತ್ತು ಚಿತ್ರತಂಡ. ಸದ್ಯ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಉತ್ತಮ ನಾಳೆಗಾಗಿ ಎಲ್ಲಾ ಶಕ್ತಿಗಳು ಒಗ್ಗೂಡುತ್ತವೆ ಎಂಬ ಕ್ಯಾಪ್ಷನ್ ನೀಡಿದ ವೈಜೈಂತಿ ಮೂವೀಸ್, ಹೊಸ ಪೋಸ್ಟರ್ ಜತೆಗೆ ಬಿಡುಗಡೆ ದಿನವನ್ನು ರಿವೀಲ್ ಮಾಡಿದೆ.
ಇದನ್ನೂ ಓದಿ: ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಭೇಟಿ: ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿ - Shilpa Shetty
ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್. ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಸೇರಿ ಘಟಾನುಘಟಿಗಳೇ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವಿಸ್ ಈ ಸಿನಿಮಾಗೆ ಬಂಡವಾಳ ಹೂಡಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದೆ. ಸದ್ಯ ಪೋಸ್ಟರ್, ಟೀಸರ್ನಿಂದಲೇ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋ 'ಕಲ್ಕಿ 2898 ಎಡಿ' ಜೂನ್ 27ಕ್ಕೆ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ ಪರ ಪ್ರಚಾರ ಮಾಡಲಿದ್ದಾರೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು - Sandalwood Stars Campaign