ಪತ್ರಕರ್ತರು ಚಿತ್ರರಂಗಕ್ಕೆ ಬರೋದು ಹೊಸ ವಿಚಾರವೇನಲ್ಲ. ಜಯಪ್ರಕಾಶ್ ಜರ್ನಲಿಸಂ ಮಾಡಿ 'ಜಮಾನ' ಚಿತ್ರದ ಮೂಲಕ ನಾಯಕ ನಟನಾಗಿ ಗಮನ ಸೆಳೆದಿದ್ದರು. ಇದೀಗ 'ಭಗೀರಥ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಅಸಾಧ್ಯವಾದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ಭಗೀರಥ ಪ್ರಯತ್ನ ಎನ್ನುತ್ತೇವೆ. ಇಂಥ ಒಂದು ವಿಭಿನ್ನ ಕಥೆಯನ್ನಿಟ್ಟಿಕೊಂಡು ಬರುತ್ತಿರುವ ಚಿತ್ರತಂಡ ಶೂಟಿಂಗ್ ಮುಗಿಸಿ ಬಿಡುಗಡೆ ಸಜ್ಜಾಗಿದೆ.
![Actress Roopashree](https://etvbharatimages.akamaized.net/etvbharat/prod-images/05-09-2024/kn-bng-03-bhagieratha-cinema-muolaka-prekashakara-mundie-baralieruva-pathrakartha-7204735_04092024210756_0409f_1725464276_905.jpg)
ಇತ್ತೀಚೆಗೆ ಬೆಂಗಳೂರಿನ ಹೊರವಲಯದ ಕೆ.ಆರ್.ಪುರದಲ್ಲಿ ಸೆಟ್ ಹಾಕಿ ಮೂರು ದಿನಗಳ ಕಾಲ "ಮಾವ ಮಾವ" ಎಂಬ ಪ್ರಮೋಷನಲ್ ಸಾಂಗ್ನ ಶೂಟಿಂಗ್ ನಡೆಸಲಾಗಿದೆ. ನಾಯಕ ಜಯಪ್ರಕಾಶ್, ನಾಯಕಿಯರಾದ ನಿಸರ್ಗ ಅಣ್ಣಪ್ಪ ಹಾಗೂ ರೂಪಶ್ರೀ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ. ನಾಗಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಮತ್ತು ತಮ್ಮ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
![Actress Nisarga Annappa](https://etvbharatimages.akamaized.net/etvbharat/prod-images/05-09-2024/kn-bng-03-bhagieratha-cinema-muolaka-prekashakara-mundie-baralieruva-pathrakartha-7204735_04092024210756_0409f_1725464276_376.jpg)
ನಿರ್ದೇಶಕ ರಾಮ್ ಜನಾರ್ದನ್ ಮಾತನಾಡಿ, ಹದಿನೈದು ವರ್ಷಗಳ ಹಿಂದೆ "ಬಾಯ್ ಫ್ರೆಂಡ್" ಚಿತ್ರದ ಮೂಲಕ ನಿರ್ದೇಶಕನಾದೆ. ಇದೀಗ ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. "ಭಗೀರಥ" ಹೆಸರೇ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನ ಕಥೆ. ನಮ್ಮ ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ವಾರ ಚಿತ್ರ ಸೆನ್ಸಾರ್ ಮುಂದೆ ಹೋಗಲಿದೆ. ಇತ್ತೀಚೆಗೆ ಈ ಚಿತ್ರದ ಪ್ರಮೋಷನಲ್ ಸಾಂಗ್ನ ಶೂಟಿಂಗ್ ಕೆ.ಆರ್.ಪುರದಲ್ಲಿ ನಡೆದಿದ್ದು, ಜಯಪ್ರಕಾಶ್, ನಿಸರ್ಗ, ರೂಪಶ್ರೀ ಭಾಗಿಯಾಗಿದ್ದರು. ಈ ಹಾಡನ್ನು ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುವುದಿಲ್ಲ. ಚಿತ್ರದಲ್ಲೂ ಇರಲಿದೆ. ಮಂಗ್ಲಿ ಹಾಗೂ ವಿಜಯ್ ಪ್ರಕಾಶ್ ಈ ಹಾಡಿಗೆ ಸಾಥ್ ನೀಡಿದ್ದಾರೆಂದು ತಿಳಿಸಿದರು.
!['Bhagiratha' film team](https://etvbharatimages.akamaized.net/etvbharat/prod-images/05-09-2024/kn-bng-03-bhagieratha-cinema-muolaka-prekashakara-mundie-baralieruva-pathrakartha-7204735_04092024210756_0409f_1725464276_0.jpg)
ನಾಯಕ ನಟ ಜಯಪ್ರಕಾಶ್ ಮಾತನಾಡಿ, ಭಗೀರಥ ಚಿತ್ರದಲ್ಲಿ ಯಾವುದಕ್ಕೂ ಹೆದರದ, ವಿಲ್ ಪವರ್ ಇರುವ ವ್ಯಕ್ತಿಯ ಪಾತ್ರ ನನ್ನದು. ಈ ಚಿತ್ರದ ಹೈಲೆಟ್ಸ್ ಸಾಹಸ ಸನ್ನಿವೇಶಗಳು. ನಾನು ಕರಾಟೆ ಪಟು ಆಗಿರುವುದರಿಂದ ಸಾಹಸ ಸನ್ನಿವೇಶದಲ್ಲಿ ನಟಿಸುವುದು ಸುಲಭವಾಯಿತು. ಇದೊಂದು ಕೌಟುಂಬಿಕ ಚಿತ್ರ ಎಂದು ತಿಳಿಸಿದರು.
ಜಯಪ್ರಕಾಶ್ ಜೊತೆ ನಿಸರ್ಗ ಅಣ್ಣಪ್ಪ ಮತ್ತು ರೂಪಶ್ರೀ ಅಲ್ಲದೇ ಖಳನಟ ಶಶಿಧರ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ, ಶಶಿಧರ್ ಸೇರಿದಂತೆ ಮುಂತಾದವರಿದ್ದಾರೆ.
ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ.ರಮೇಶ್ ಮತ್ತು ಬಿ.ಭೈರಪ್ಪ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮಾ ಅವರ ಸಂಗೀತ ನಿರ್ದೇಶನ ಹಾಗೂ ಸೂರಿ ಚಿತ್ತೂರು ಅವರ ಛಾಯಾಗ್ರಹಣವಿದ್ದು, ಡ್ಯಾನ್ಸ್ ಮಾಸ್ಟರ್ ನಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಚೇತನ್ ರಮೇಶ್ ಕೆಲಸ ಮಾಡಿದ್ದಾರೆ. ಟೈಟಲ್ನಿಂದ ಸದ್ದು ಮಾಡುತ್ತಿರುವ 'ಭಗೀರಥ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.