ತಮ್ಮ ಅಮೋಘ ಅಭಿನಯ, ವಿಭಿನ್ನ ಮ್ಯಾನರಿಸಂ, ಡೈಲಾಗ್ನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಕನ್ನಡ ಕಂಡ ಶೇಷ್ಠ ನಟ ಶಂಕರ್ ನಾಗ್ ಇಹಲೋಕ ತ್ಯಜಿಸಿ ಇಂದಿಗೆ 34 ವರ್ಷ. ಆಟೋರಾಜ ಎಂದೇ ಜನಮನದಲ್ಲಿ ಉಳಿದಿರುವ ನಟನ ಪುಣ್ಯಸ್ಮರಣೆ ನಡೆಯುತ್ತಿದೆ.
12 ವರ್ಷ, 80ಕ್ಕೂ ಹೆಚ್ಚು ಸಿನಿಮಾ: 1990ರ ಈ ದಿನ ಶಂಕರ್ ನಾಗ್ ಎಂಬ ಕನ್ನಡದ ಕೀರ್ತಿ ಕಣ್ಮರೆಯಾಯಿತು. ಅವರ 35 ವರ್ಷಗಳ ಜೀವಿತಾವಧಿಯಲ್ಲಿ ಊಹೆಗೂ ಮೀರಿದ ಪರಂಪರೆ ಬಿಟ್ಟು ಹೋದರೂ, ಅವರ ಅಕಾಲಿಕ ಮರಣ ಮಾತ್ರ ರಾಷ್ಟ್ರಾದ್ಯಂತ ಜನರನ್ನು ಆಘಾತಕ್ಕೀಡು ಮಾಡಿತ್ತು.
ಆ ಸಂದರ್ಭ ದೇಶದಲ್ಲಿ ಹೆಚ್ಚು ದೂರದರ್ಶನಗಳಿಲ್ಲವಾದರೂ ಅವರ 'ಮಾಲ್ಗುಡಿ ಡೇಸ್' ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 8.30 ರಿಂದ 9ರ ವರೆಗೆ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಹೆಚ್ಚಿನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು. ಚಿತ್ರರಂಗದಲ್ಲಿ 12 ವರ್ಷಗಳ ಅವಧಿಯಲ್ಲಿ, ಸುಮಾರು 80ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಗಂಭೀರ ಅಪಘಾತದಲ್ಲಿ ಇಹಲೋಕದಿಂದ ಮರೆಯಾದ ಕನ್ನಡ ತಾರೆ: ಶಂಕರ್ ನಾಗ್ ತಮ್ಮ ಪತ್ನಿ ಮತ್ತು ಮಗಳೊಂದಿಗೆ ತಮ್ಮ ಕಾರಿನಲ್ಲಿ 1990ರ ಸೆಪ್ಟೆಂಬರ್ 30 ರಂದು "ಜೋಕುಮಾರಸ್ವಾಮಿ" ಚಿತ್ರದ ಮಹೂರ್ತ ಸಮಾರಂಭಕ್ಕೆ ಹೊರಟಿದ್ದರು. ದುರಾದೃಷ್ಟವಶಾತ್ ದಾವಣಗೆರೆಯ ಆನಗೋಡು ಎಂಬಲ್ಲಿ ಅಪಘಾತಕ್ಕೀಡಾದರು. ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಮುಖಾಮುಖಿಯಾಗಿತ್ತು. ಅವರ ಪತ್ನಿ ಅರುಂಧತಿ ಮತ್ತು ಮಗಳು ಕಾವ್ಯ ಅಪಘಾತದಿಂದ ಬದುಕುಳಿದರು, ಆದರೆ ಶಂಕರ್ ನಾಗ್ ಕೊನೆಯುಸಿರೆಳೆದರು. ಶಂಕರ್ ನಾಗ್ ಸ್ಥಳದಲ್ಲೇ ಮೃತಪಟ್ಟರೆ, ಅರುಂಧತಿ ಮತ್ತು ಕಾವ್ಯ ಗಂಭೀರವಾಗಿ ಗಾಯಗೊಂಡಿದ್ದರು.
ಆಟೋರಾಜನ 34ನೇ ಪುಣ್ಯಸ್ಮರಣೆ: ಶಂಕರ್ ನಾಗ್ ಇಹಲೋಕ ತ್ಯಜಿಸಿ 34 ವರ್ಷಗಳಾದರೂ, ಅವರ ನೆನಪುಗಳು ಮಾತ್ರ ಸದಾ ಜೀವಂತ. ಸಹೋದರ ಅನಂತ್ ನಾಗ್ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಆರಾಧಿಸ್ಪಡುವ ನಟ. ಹಲವು ಸಂದರ್ಶನಗಳಲ್ಲಿ ಸಹೋದರನನ್ನು ಹಾಡಿ ಹೊಗಳಿದ್ದುಂಟು, ಕಣ್ಣೀರು ಸುರಿಸಿದ್ದುಂಟು. 1990ರ ಸೆಪ್ಟೆಂಬರ್ 30 ಕನ್ನಡ ಚಿತ್ರರಂಗಕ್ಕೆ ಬರಸಿಡಿಲು ಬಡಿದ ದಿನ ಎಂದೇ ಹೇಳಬಹುದು.
ಶಂಕರ್ ನಾಗ್ ವೈಯಕ್ತಿಕ ಜೀವನ: ಸದಾನಂದ ನಾಗರಕಟ್ಟೆ ಹಾಗೂ ಆನಂದಿ ನಾಗರಕಟ್ಟೆ ದಂಪತಿಯ ಮೂರನೇ ಮಗುವಾಗಿ 1954ರ ನವೆಂಬರ್ 9ರ ಮಂಗಳವಾರದಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಲ್ಲಾಪುರದಲ್ಲಿ ಜನಿಸಿದರು. ಭಟ್ಕಳದ ಶಿರಾಲಿ ಬಳಿಯ ಕೊಂಕಣಿ ಮಾತನಾಡುವ ಸಾರಸ್ವತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಶಂಕರ್. ಶಂಕರ್ ನಾಗ್ ಮಾತೃಭಾಷೆ ಕೊಂಕಣಿ ಜೊತೆಗೆ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು.
ಶಂಕರ್ ನಾಗ್, ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ಕಿರಿಯ ಸಹೋದರ. ಸಹೋದರರು ಬಹಳ ಆತ್ಮೀಯರಾಗಿ ಗುರುತಿಸಿಕೊಂಡಿದ್ದರು. ಶ್ಯಾಮಲಾ ಅವರ ಅಕ್ಕ. ಶಂಕರ್ ನಾಗ್ ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಮುಂಬೈಗೆ ತೆರಳಿದರು. ಅಲ್ಲಿ ಅವರು ರಂಗಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅರುಂದತಿ ನಾಗ್ (ನೀ ರಾವ್) ಅವರನ್ನು ಸೆಟ್ ಒಂದರಲ್ಲಿ ಭೇಟಿಯಾದರು. ನಂತರ ಇಬ್ಬರೂ ದಾಂಪತ್ಯ ಜೀವನ ಆರಂಭಿಸಿದರು. ಮದುವೆ ಬಳಿಕ ದಂಪತಿ ಬೆಂಗಳೂರಿನ ಹೊರವಲಯದಲ್ಲಿರುವ ತೋಟದ ಮನೆಗೆ ತೆರಳಿದರು. ಕಾವ್ಯಾ ನಾಗ್ ಈ ದಂಪತಿಯ ಪುತ್ರಿ.
12 ವರ್ಷಗಳಲ್ಲಿ 80 ಸಿನಿಮಾ: ಶಂಕರ್ ನಾಗ್ 12 ವರ್ಷಗಳ ತಮ್ಮ ನಟನಾ ಅವಧಿಯಲ್ಲಿ ಸರಿ ಸುಮಾರು 80 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. "ಕರಾಟೆ ಕಿಂಗ್" ಎಂದು ಹೆಸರುವಾಸಿಯಾದರು. 1980ರಲ್ಲಿ ಮಿಂಚಿನ ಓಟ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರವನ್ನೂ ಅವರೇ ಬರೆದು ನಿರ್ಮಿಸಿದ್ದಾರೆ. ಎಸ್ಪಿ ಸಾಂಗ್ಲಿಯಾನ, ಗೀತಾ, ಆಟೋರಾಜ, ಕಾರ್ಮಿಕ ಕಳ್ಳನಲ್ಲ, ನೋಡಿ ಸ್ವಾಮಿ ನಾವಿರೋದು ಹೀಗೆ, ಅಪೂರ್ವ ಸಂಗಮ, ತರ್ಕ, ಗಂಡು ಭೇರುಂಡ, ಸಿ.ಬಿ.ಐ ಶಂಕರ್, ನಿಘೂಡ ರಹಸ್ಯ, ಜನ್ಮ ಜನ್ಮದ ಅನುಬಂಧ= ನಟನ ಜನಪ್ರಿಯ ಸಿನಿಮಾಗಳು.
ಕಿರುತೆರೆಯಲ್ಲೂ ಕಮಾಲ್ ಮಾಡಿದ್ದ ಶಂಕರ್ ನಾಗ್: ತಮ್ಮ ಅಮೋಘ ಅಭಿನಯದಿಂದ ಕರುನಾಡಿನಾದ್ಯಂತ ಜನಪ್ರಿಯರಾಗಿದ್ದಾರೆ. ನಿರ್ದೇಶಕರಾಗಿ ಮಾಲ್ಗುಡಿ ಡೇಸ್ ಮೂಲಕ ಸಖತ್ ಸದ್ದು ಮಾಡಿದ್ದರು. ಆರ್ ಕೆ ನಾರಾಯಣ್ ಅವರ ಕಾದಂಬರಿ ಮಾಲ್ಗುಡಿ ಡೇಸ್ ಅನ್ನು ಅದ್ಭುತವಾಗಿ ತೆರೆ ಮೇಲೆ ತಂದು ಭಾರತದಾದ್ಯಂತ ಹೆಸರುವಾಸಿಯಾದರು.
ಮಾಲ್ಗುಡಿ ಡೇಸ್ ಅನ್ನು 1987 ರಿಂದ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರ ಮಾಡಲಾಯಿತು. ಆ ಕಾಲದಲ್ಲೇ ಮಿಲಿಯನ್‌ಗಟ್ಟಲೆ ಜನರು ಅದನ್ನು ವೀಕ್ಷಿಸಿ ಸಂಭ್ರಮಿಸಿದ್ದರು. ಭಾರತೀಯ ಟಿವಿ ಇತಿಹಾಸದಲ್ಲೇ ಮಾಲ್ಗುಡಿ ಡೇಸ್ ವಿಶಿಷ್ಟ ಕಿರುತೆರೆ ಧಾರಾವಾಹಿಯಾಗಿ ಗುರುತಿಸಿಕೊಂಡಿದೆ. ಮಾಲ್ಗುಡಿ ಡೇಸ್ ಅನ್ನು 2012ರಲ್ಲಿ ಹಿಂದಿಯಲ್ಲಿ ಕನ್ನಡ ಸಬ್ ಟೈಟಲ್ನೊಂದಿಗೆ ಮರು ಪ್ರಸಾರ ಮಾಡಲಾಯಿತು.
ಶಂಕರ್ ನಾಗ್ ಕಾಣಿಸಿಕೊಂಡ ಟಿವಿ ಕಾರ್ಯಕ್ರಮಗಳಿವು:
- ಮಾಲ್ಗುಡಿ ಡೇಸ್ (1987): ಡಿಡಿ ನ್ಯಾಷನಲ್ನನ್ನಲ್ಲಿ ಪ್ರಸಾರವಾಯಿತು. ಆರ್ ಕೆ ನಾರಾಯಣ್ ಅವರ ಅದೇ ಶೀರ್ಷಿಕೆಯ ಕಾದಂಬರಿ ಆಧಾರಿತ ಧಾರಾವಾಹಿ.
- ಪರಿಚಯ: ಡಿಡಿ ಕನ್ನಡದಲ್ಲಿ ಪ್ರಸಾರವಾಗಿದ್ದು, ಶಂಕರ್ ನಾಗ್ ಕಾರ್ಯಕ್ರಮವನ್ನು ನಿರೂಪಿಸಿದರು.
- ಸ್ವಾಮಿ(1987): ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಗಿತ್ತು.
ರಂಗಭೂಮಿ: ಶಂಕರ್ ನಾಗ್ ಅವರು ಸಹೋದರ ಅನಂತ್ ನಾಗ್, ಪತ್ನಿ ಅರುಂಧತಿ ಮತ್ತು ಆತ್ಮೀಯ ಗೆಳೆಯರಾದ ರಮೇಶ್ ಭಟ್, ಕಾಶಿ ಅವರೊಂದಿಗೆ ಸಂಕೇತ್ ಎಂಬ ನಾಟಕ ತಂಡವನ್ನು ಕಟ್ಟಿದ್ದರು. ಗಿರೀಶ್ ಕಾರ್ನಾಡ್ ಅವರ "ಅಂಜು ಮಲ್ಲಿಗೆ" ನಾಟಕವನ್ನು ನಿರ್ದೇಶಿಸಿದ್ದರು.
ಪ್ರಶಸ್ತಿಗಳು:
- ಒಂದಾನೊಂದು ಕಾಲದಲ್ಲಿ (1978): ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ (ದೆಹಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ).
- 22 ಜೂನ್ 1897 (ಮರಾಠಿ ಚಲನಚಿತ್ರ, 1979) : ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ (ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ)
- ಮಿಂಚಿನ ಓಟ (1980): ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ (ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ)
- ಮಿಂಚಿನ ಓಟ: ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ (ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ)
- ಗೀತಾ (1981): ರಾಷ್ಟ್ರೀಯ ಪ್ರಶಸ್ತಿ.
- ನೋಡಿ ಸ್ವಾಮಿ ನಾವಿರೋದು ಹೀಗೆ (1983): ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ (ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ)
- ಆ್ಯಕ್ಷಿಡೆಂಟ್ (1984) - ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ (ರಾಷ್ಟ್ರೀಯ ಪ್ರಶಸ್ತಿ)
- ಆ್ಯಕ್ಷಿಡೆಂಟ್: ಅತ್ಯುತ್ತಮ ಚಿತ್ರ (ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ)
- ದಿ ವಾಚ್‌ಮ್ಯಾನ್ (1986): ಅತ್ಯುತ್ತಮ ಚಲನಚಿತ್ರ (ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ).
- ಸ್ವಾಮಿ (1987): ಅತ್ಯುತ್ತಮ ಮಕ್ಕಳ ಚಿತ್ರ
ಇತರ ಕೊಡುಗೆಗಳು:
- ರಂಗ ಶಂಕರ: ನಾಟಕ ರಂಗಮಂದಿರವನ್ನು ಅವರ ಪತ್ನಿ ಅರುಂಧತಿ ನೋಡಿಕೊಳ್ಳುತ್ತಿದ್ದಾರೆ.
- ಬೆಂಗಳೂರು ಮೆಟ್ರೋ: ಲಂಡನ್ ಮೆಟ್ರೋದಂತೆ 1990ರಲ್ಲೇ ಬೆಂಗಳೂರಿಗೆ ಮೆಟ್ರೋ ರೈಲುಗಳನ್ನು ತರಲು ಆಲೋಚಿಸಿದ್ದರು ಶಂಕರ್ನಾಗ್.
- ಕಂಟ್ರಿ ಕ್ಲಬ್ : ಬೆಂಗಳೂರಿನ ತಮ್ಮ ಫಾರ್ಮ್ ಹೌಸ್ ಬಳಿ ಕ್ಲಬ್ ಒಂದನ್ನು ಆರಂಭಿಸಲು ಮುಂದಾಗಿದ್ದರು.
- ನಂದಿ ಹಿಲ್ಸ್ಗೆ ರೋಪ್ ವೇ: ನಂದಿ ಹಿಲ್ಸ್ಗೆ ರೋಪ್ ವೇಗಳನ್ನು ನಿರ್ಮಿಸುವುದು ಅವರ ಆಲೋಚನೆಗಳಲ್ಲಿ ಒಂದಾಗಿತ್ತು.
- ಪ್ರಿಫ್ಯಾಬ್ ಹೌಸಿಂಗ್ ಸ್ಕೀಮ್: ಜರ್ಮನ್ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಕಡಿಮೆ ವೆಚ್ಚದ ಪ್ರಿಫ್ಯಾಬ್ ವಸತಿ ನಿರ್ಮಿಸುವ ಯೋಜನೆಯಂತಹ ಆಲೋಚನೆಗಳನ್ನು ಹೊಂದಿದ್ದರು.
- ವೆಚ್ಚವನ್ನು ಭರಿಸಲಾಗದ ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಹೆಲ್ತ್ ಕೇರ್ ಇರಬೇಕೆಂದು ಆಲೋಚಿಸಿದ್ದರು.
- ಸಂಕೇತ್ ಎಲೆಕ್ಟ್ರಾನಿಕ್ಸ್: ಅವರು ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸ್ಟುಡಿಯೋವನ್ನು ಪ್ರಾರಂಭಿಸಿದರು. ಈ ಸ್ಟುಡಿಯೋ ಸ್ಥಾಪನೆಗೂ ಮೊದಲು ಕನ್ನಡ ಚಲನಚಿತ್ರಗಳನ್ನು ಮದ್ರಾಸಿನಲ್ಲಿ ರೆಕಾರ್ಡ್ ಮಾಡಲಾಗುತ್ತಿತ್ತು.