ಸೂಪರ್ ಹಿಟ್ 'ಸಲಗ' ಸಿನಿಮಾ ನಂತರ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರೋ 'ಭೀಮ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುವುದರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ಕಮಾಲ್ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಗಡಿ ರಸ್ತೆಯಲ್ಲಿರುವ ಎಮ್ಎಮ್ಬಿ ಲೆಗಸ್ಸಿಯಲ್ಲಿ 'ಭೀಮ' ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ನಟ-ನಿರ್ದೇಶಕ ದುನಿಯಾ ವಿಜಯ್, ನಾಯಕಿ ಅಶ್ವಿನಿ, ಡ್ರಾಗನ್ ಮಂಜು, ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಹಾಗೂ ವಿತರಕರಾದ ಕಾರ್ತಿಕ್, ಯೋಗಿ ಜಿ ರಾಜ್, ಜಯಣ್ಣ ಸೇರಿದಂತೆ ಇಡೀ ಭೀಮ ಚಿತ್ರತಂಡ ಪಾಲ್ಗೊಂಡಿತ್ತು.
ಡ್ರಗ್ಸ್ ಕುರಿತ ಕಥೆಯೇ ಭೀಮ: 'ಭೀಮ' ಸಕ್ಸಸ್ ಬಗ್ಗೆ ಮಾತನಾಡಿದ ದುನಿಯಾ ವಿಜಯ್, ಗಾಂಜಾ ಹಾಗೂ ಡ್ರಗ್ಸ್ ದಂಧೆಯಿಂದಾಗಿ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೆ ಜನರು ಹೇಗೆ ಹಾಳಾಗುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು ಅಲ್ಲದೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಗಾಂಜಾ ಮತ್ತು ಡ್ರಗ್ಸ್ನಿಂದ ಯುವಕ, ಯುವತಿಯರು ಎಷ್ಟರ ಮಟ್ಟಿಗೆ ಹಾಳಾಗಿದ್ದಾರೆ ಅನ್ನೋದೇ ನನ್ನ ಭೀಮ ಸಿನಿಮಾದ ಕಥೆ ಎಂದು ತಿಳಿಸಿದರು.
ಏಳೆಂಟನೇ ತರಗತಿಯಲ್ಲಿಯೇ ಗಾಂಜಾಗೆ ಅಡಿಕ್ಟ್ ಆಗಿ, ಕೊನೆಗೆ ವ್ಯಸನಮುಕ್ತ ಕೇಂದ್ರದಲ್ಲಿ ಸೇರಿಕೊಂಡು ಈಗ ಗುಣಮುಕ್ತನಾಗುತ್ತಿರುವ ಗಾಂಜಾ ವ್ಯಸನಿಯನ್ನು ಸ್ವತಃ ವಿಜಯ್ ಮಾತನಾಡಿಸಿದ್ದು, ವಿಡಿಯೋವನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ವಿಜಯ್, ಎಷ್ಟನೇ ವಯಸ್ಸಿಗೆ ನೀನು ಗಾಂಜಾ ಸೇದುತ್ತಿದ್ದೆಯೆಂದು ಪ್ರಶ್ನಿಸಿದ್ದು, ನಾನು ಎಂಟನೇ ತರಗತಿಗೆ ಗಾಂಜಾ ಸೇದೋದಿಕ್ಕೆ ಶುರು ಮಾಡಿದೆ. ಸ್ನೇಹಿತರ ಸಹವಾಸದಿಂದ ನಾನು ಗಾಂಜಾಗೆ ದಾಸನಾಗಿದ್ದೆ. ಸದ್ಯ ಗುಣಮುಖನಾಗುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಸಂಪೂರ್ಣ ವಿಡಿಯೋಗಳು ನಟನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿದೆ.
ಪೊಲೀಸರ ಗಮನಕ್ಕೆ ತರುತ್ತೇನೆ: ಭೀಮ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಕೊಟ್ಟಿದ್ದೀರಾ. ಮುಂದೆಯೂ ಗಾಂಜಾ ಹಾಗೂ ಡ್ರಗ್ಸ್ ಬಗ್ಗೆ ನಿಮ್ಮ ಹೋರಾಟವಿರುತ್ತಾ? ಎಂದು ದುನಿಯಾ ವಿಜಯ್ ಅವರನ್ನು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ನಟ, ಹೌದು. ದಾಖಲೆ ಸಮೇತ ಪೊಲೀಸ್ ಕಮೀಷನರ್ಗೆ ಹೋಗಿ ಈ ಬಗ್ಗೆ ತಿಳಿಸುತ್ತೇನೆ. ಹಾಗೇ ಗೃಹ ಮಂತ್ರಿಗಳಿಗೂ ಈ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಳೆ ಘೋಷಣೆಯಾಗಲಿದೆ ವಿನಯ್ ರಾಜ್ಕುಮಾರ್ ನಟನೆಯ 'ಪೆಪೆ' ರಿಲೀಸ್ ಡೇಟ್ - PEPE Release Date
ಬೆದರಿಕೆಗಳು ಬಂದಿವೆ: ಗಾಂಜಾ ಹಾಗೂ ಡ್ರಗ್ಸ್ ಬಗ್ಗೆ ಕೆಲ ದಾಖಲೆಯ ವಿಡಿಯೋಗಳನ್ನು ಹಂಚಿಕೊಂಡಿರುವುದಕ್ಕೆ ನನಗೆ ಈಗಾಗಲೇ ಕೆಲ ಗಾಂಜಾ ಮಾಫಿಯಾದವರು ಫೋನ್ ಮಾಡಿ ಬೆದರಿಕೆಗಳನ್ನ ಹಾಕುತ್ತಿದ್ದಾರೆ. ಅದಕ್ಕೆ ನಾನು ಬಗ್ಗೋ ಮಗನೇ ಅಲ್ಲ. ನನಗೂ ಕಾನೂನು ಗೊತ್ತಿದೆ. ಇದಕ್ಕೆಲ್ಲ ಹೆದರಲ್ಲ. ನನ್ನ ಉದ್ದೇಶ ಇಷ್ಟೇ, ಕಾಲೇಜು ಯುವಕ, ಯುವತಿಯರು ಹಾಳುಗುತ್ತಿರೋದನ್ನು ತಪ್ಪಿಸಬೇಕೆಂಬುದರ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಪ್ರಯತ್ನ. ಭೀಮ ಸಿನಿಮಾವನ್ನು ಲಾ ಓದುತ್ತಿರುವ ವಿದ್ಯಾರ್ಥಿಗಳು ನೋಡಲಿದ್ದು, ಅದರಿಂದ ಒಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ: 'ಸೋತ ಹಾಡುಗಳು ನನ್ನನ್ನು ಕಾಡುತ್ತವೆ': ಗೀತೆ ರಚನೆಕಾರ ಕೆ.ಕಲ್ಯಾಣ್ - K Kalyan Interview
ಬೈಕ್ ವೀಲಿಂಗ್, ಗಾಂಜಾ, ಡ್ರಗ್ಸ್ ಮಾಫಿಯಾ ಬಗೆಗಿನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ, ಪ್ರಿಯಾ, ಡ್ರಾಗನ್ ಮಂಜು ಸೇರಿದಂತೆ ದೊಡ್ಡ ತಾರಾಬಳಗ ಇದೆ. ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಾಸ್ತಿಯವರ ಡೈಲಾಗ್ಸ್ ಇದೆ. ದೀಪು ಎಸ್ ಕುಮಾರ್ ಸಂಕಲನ ನಿರ್ವಹಿಸಿದ್ರೆ, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಸಾಹಸ ಮತ್ತು ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.