ಹೆಚ್.ಎಂ. ಕೃಷ್ಣಮೂರ್ತಿ ಅಭಿನಯದ 'ನಾಡಸಿಂಹ ಕೆಂಪೇಗೌಡ' ಆಲ್ಬಂ ಸಾಂಗ್ ಬಿಡುಗಡೆ - Album song release - ALBUM SONG RELEASE
ಸ್ವತಃ ಜೇಡ್ರಳ್ಳಿ ಕೃಷ್ಣಪ್ಪ ಅವರೇ ಅಭಿನಯಿಸಿ, ನಿರ್ಮಾಣ ಮಾಡಿರುವ ಕೆಂಪೇಗೌಡ ಅವರ ಕುರಿತ ಆಲ್ಬಂ ಸಾಂಗ್ ಎಕೆಜಿ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದೆ.
Published : Jun 15, 2024, 6:03 PM IST
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ ಹೆಸರಲ್ಲಿ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಚಿತ್ರಗಳು ಬರುತ್ತಿವೆ. ಇದೀಗ, ಈ ಹಿಂದೆ ಜೇಡ್ರಳ್ಳಿ ಎಂಬ ಸಿನಿಮಾ ಮಾಡಿದ್ದ ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಈಗ ನಾಡಪ್ರಭು ಶ್ರೀ ಕೆಂಪೇಗೌಡ ಅವರ ಕುರಿತಾದ ಆಲ್ಬಂ ಸಾಂಗ್ ಒಂದನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅದ್ಧೂರಿಯಾಗಿ ಈ ಆಲ್ಬಂ ಸಾಂಗ್ ಅನ್ನು ಬಿಡುಗಡೆ ಮಾಡಲಾಯಿತು.
ಜೆ.ಕೆ. ಶರ್ಮ ಗುರೂಜಿ, ನಟ ವಸಿಷ್ಠ ಸಿಂಹ, ಹಿರಿಯ ನಟ ಅಶೋಕ್, ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟರಾದ ಧರ್ಮ, ತಬಲ ನಾಣಿ, ನೀನಾಸಂ ಅಶ್ವಥ್, ನಿರ್ಮಾಪಕ ಸಂಜಯ್ ಗೌಡ ಸಮ್ಮುಖದಲ್ಲಿ ನಾಡಸಿಂಹ ಕೆಂಪೇಗೌಡ ಎಂಬ ಹಾಡನ್ನು ಲೋಕಾರ್ಪಣೆ ಮಾಡಲಾಯಿತು.
ಬಳಿಕ ಮಾತನಾಡಿದ ಹೆಚ್.ಎಂ. ಕೃಷ್ಣಮೂರ್ತಿ, "ನಾನು ಕೆಂಪೇಗೌಡರ ಆರಾಧಕ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಊರುಗಳಿಗೆ ಕೆಂಪೇಗೌಡರು ಮಾಡಿರುವ ಉಪಕಾರ ಮಹತ್ತರವಾದದ್ದು. ಅಂತಹ ಪುಣ್ಯಾತ್ಮರ ಸ್ಮರಣೆಗಾಗಿ ಈ ಹಾಡನ್ನು ನಿರ್ಮಿಸಿದ್ದೇನೆ. ಮೊದಲ ಬಾರಿಗೆ ಕೆಂಪೇಗೌಡರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಕೆಂಪೇಗೌಡರ ಬಗ್ಗೆ ತಿಳಿಸುವ ಈ ಹಾಡು ನಮ್ಮ ಎಕೆಜಿ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಆಸುಪಾಸಿನಲ್ಲಿರುವ ಸ್ಥಳಗಳನ್ನು ನಮ್ಮ ಯೂಟ್ಯೂಬ್ ಚಾನಲ್ ಮೂಲಕ ಪರಿಚಯ ಮಾಡಿಕೊಡುತ್ತಿದ್ದೇನೆ. ಕೆಂಪೇಗೌಡರ ಕುರಿತು ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ. ಈ ಹಾಡು ಅದ್ಧೂರಿಯಾಗಿ ಹಾಗೂ ಅದ್ಭುತವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ" ಎಂದರು.
ಕೆ.ರಾಮನಾರಾಯಣ್ ಅವರು ಬರೆದಿರುವ ಈ ಹಾಡಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಶಂಕರ್ ಮಹಾದೇವನ್ ಮತ್ತು ಅನುರಾಧ ಭಟ್ ಗಾಯನವಿದೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ಕೃಷ್ಣ ಕುಮಾರ್ ಛಾಯಾಗ್ರಹಣ, ಪುನೀತ್ ಸಂಕಲನವಿದೆ.
ಕೆಂಪೇಗೌಡರ ಪಾತ್ರದಲ್ಲಿ ಹೆಚ್.ಎಂ. ಕೃಷ್ಣಮೂರ್ತಿ ಕಾಣಿಸಿಕೊಂಡಿದ್ದು, ಉಳಿದಂತೆ ಟಿ.ಎಸ್ ನಾಗಾಭರಣ, ವಿನಯ ಪ್ರಸಾದ್, ಧರ್ಮ, ನೀನಾಸಂ ಅಶ್ವಥ್, ಮುನಿ, ಹೆಚ್.ವಾಸು, ವಿಕ್ಟರಿ ವಾಸು ಮುಂತಾದವರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: 'ದುಃಖದಿಂದ ಪ್ರೀತಿವರೆಗೆ': ಯೂಟ್ಯೂಬ್‌ನಲ್ಲಿ 400M ವೀಕ್ಷಣೆ ಕಂಡ ಡಿಯರ್ ಕಾಮ್ರೇಡ್ - Dear Comrade