ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮೂರು ವರ್ಷಗಳ ಬಳಿಕ ಬೆಳ್ಳಿತೆರೆ ಮೇಲೆ ಅಬ್ಬರಿಸಲು ರೆಡಿಯಾಗಿರುವ ಬಹುನಿರೀಕ್ಷಿತ ಚಿತ್ರ 'ಮಾರ್ಟಿನ್'. ಪೋಸ್ಟರ್, ಟ್ರೇಲರ್ ಹಾಗೂ ಹಾಡುಗಳಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿರುವ ಚಿತ್ರವಿದು. ಇದರಲ್ಲಿ ಧ್ರುವ ಸರ್ಜಾ ಹಾಕಿರುವ ಕಾಸ್ಟೂಮ್ ಹಾಗೂ ಟ್ಯಾಟೂ ನೋಡುಗರ ಗಮನ ಸೆಳೆದಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಆ್ಯಕ್ಷನ್ ಪ್ರಿನ್ಸ್ಗೆ ಕಾಸ್ಟೂಮ್ ಡಿಸೈನ್ ಮಾಡಿದ್ದು ಯಾರು? ಹಾಗೂ ಟ್ಯಾಟೂ ಹಾಕಿದ್ದು ಯಾರು? ಅನ್ನೋ ಕುತೂಹಲ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಲ್ಲಿರುತ್ತದೆ. ಈ ಬಗ್ಗೆ ಚಿತ್ರತಂಡ ಮೇಕಿಂಗ್ ವಿಡಿಯೋ ಒಂದನ್ನು ಅನಾವರಣಗೊಳಿಸಿದೆ.
'ಮಾರ್ಟಿನ್', ದೇಶ ಪ್ರೇಮದ ಜೊತೆಗೆ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಜೊತೆಗೊಂದು ಮುದ್ದಾದ ಪ್ರೇಮಕಥೆಯೂ ಇದೆ. ಟ್ರೇಲರ್ನಲ್ಲಿ ರಿವೀಲ್ ಆಗಿರುವ ಧ್ರುವ ಸರ್ಜಾರ ಕ್ಯಾರೆಕ್ಟರ್ಗಳನ್ನು ನೋಡುತ್ತಿದ್ರೆ, ನಟ ಈ ಚಿತ್ರದಲ್ಲಿ ಡಬಲ್ ರೋಲ್ ನಿಭಾಯಿಸಿರುವಂತೆ ಕಾಣುತ್ತಿದೆ. ಆದ್ರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇದೀಗ ಧ್ರುವ ಸರ್ಜಾರಿಗೆ ಕಾಸ್ಟೂಮ್ ಡಿಸೈನ್ ಮಾಡಿರುವ ಚೇತನ್ ರಾ ಹಾಗೂ ಟ್ಯಾಟೂ ಆರ್ಟಿಸ್ಟ್ ವಿನೋದ್ ಈ ಚಿತ್ರಕ್ಕೆ ಕೆಲಸ ಮಾಡಿದ್ದು ಎಷ್ಟು ಚಾಲೆಂಜಿಂಗ್ ಆಗಿತ್ತು ಅನ್ನೋದನ್ನು ಹಂಚಿಕೊಂಡಿದ್ದಾರೆ.
ಮೊದಲು ಮಾತನಾಡಿದ ಕಾಸ್ಟೂಮ್ ಡಿಸೈನರ್ ಚೇತನ್ ರಾ, ಮಾರ್ಟಿನ್ ಸಿನಿಮಾ ಅಂತಾ ಅಂದಾಗ ಕಾಸ್ಟೂಮ್ ಹೀಗೆ ಇರಬೇಕು ಅಂತಾ ಒಂದಿಷ್ಟು ಪ್ಲಾನ್ ಮಾಡಿಕೊಂಡಿದ್ವಿ. ನಂತರ, ತಂಡದ ಜೊತೆ ಚರ್ಚೆ ಮಾಡಬೇಕಾದ್ರೆ ಬೇರೆ ತರ ಇರಲಿ ಅನ್ನೋ ನಿರ್ಧಾರವಾಯ್ತು ಎಂದು ತಿಳಿಸಿದ್ದಾರೆ.
ಟ್ಯಾಟೂ ಆರ್ಟಿಸ್ಟ್ ವಿನೋದ್ ಮಾತನಾಡಿ, ಧ್ರುವ ಸರ್ ಅಸಿಸ್ಟೆಂಟ್ ಬಳಿ ಪೆನ್ ತೆಗೆದುಕೊಂಡು ಬರುವಂತೆ ಹೇಳಿದ್ರು. ಆಗ ನಾನು ನನಗೆ ಹೇಳಿ, ನಾನೇ ಬರೆಯುತ್ತೇನಂದೆ. ಧ್ರುವ ಸರ್ಜಾ ಎಡಗೈ ತೋಳಿನ ಮೇಲಿರುವ ಟ್ಯಾಟೂ ನನ್ನ ಕೈಯಿಂದಲೇ ಹಾಕಿದ್ದು. ಒಂದು ರಫ್ ಸ್ಕೆಚ್ ನಂತರ ಎರಡು ದಿನ ನಿದ್ದೆಗೆಟ್ಟು ಅದಕ್ಕಾಗಿ ಕೆಲಸ ಮಾಡಿದ್ದೆವು ಎಂದು ತಿಳಿಸಿದರು.
ಕಾಸ್ಟೂಮ್ ಡಿಸೈನರ್ ಚೇತನ್ ಮಾತನಾಡಿ, ಧ್ರುವ ಸರ್ ಪ್ಯಾನ್ ಇಂಡಿಯಾ ಸ್ಟಾರ್. ಅವರಿಗೆ ಕಾಸ್ಟೂಮ್ ಡಿಸೈನ್ ಮಾಡೋದು ಒಂದು ಚಾಲೆಂಜಿಂಗ್ ಕೆಲಸ. ನೀವು ನೋಡಿರಬಹುದು ಧ್ರುವ ಸರ್ ಹಾಕಿರೋ ಕಾಸ್ಟೂಮ್ಗಳು ವಿಭಿನ್ನವಾಗಿವೆ. ನಿರ್ಮಾಪಕರಾದ ಉದಯ್ ಸರ್ ನನ್ನ ಮೇಲೆ ನಂಬಿಕೆಯಿಟ್ಟು ಈ ಕೆಲಸ ವಹಿಸಿದ್ರು. ನಾವು ನೆಕ್ಸ್ಟ್ ಲೆವೆಲ್ ಕಾಸ್ಟೂಮ್ ಮಾಡಿದ್ವಿ ಎಂದು ತಿಳಿಸಿದರು.
ವಿನೋದ್ ಮಾತು ಮುಂದುವರಿಸಿ, ಶೂಟಿಂಗ್ಗೂ ಮುನ್ನ ಫೋಟೋಶೂಟ್ ಇತ್ತೆಂಬ ಕಾರಣಕ್ಕೆ ನಿದ್ದೆಗೆಟ್ಟು ಕೆಲಸ ಮಾಡಿದೆವು. ಒಂದು ಲೆವೆಲ್ನ ಫೋಟೋಶೂಟ್ ಆಯಿತು. ಆದಾದ ಮೇಲೆ ಸಿನಿಮಾ ಮುಹೂರ್ತ ಆಗಿ ಹೈದರಾಬಾದ್ ನಲ್ಲಿ ಡೈರೆಕ್ಟ್ ಆಗಿ ಶೂಟಿಂಗ್ಗೆ ಹೋದಾಗ ಧ್ರುವ ಸರ್ ಟ್ಯಾಟುವನ್ನು ಇಷ್ಟಪಟ್ರು. ಚಿತ್ರದಲ್ಲಿ ಬೇರೆ ನಟರಿಗೂ ಟ್ಯಾಟೂ ಹಾಕಿದ್ದೇನೆಂದು ತಿಳಿಸಿದರು.
ಕಾಸ್ಟೂಮ್ ಡಿಸೈನರ್ ಚೇತನ್ ಹೇಳುವ ಪ್ರಕಾರ, ಕಾಸ್ಟೂಮ್ ಡಿಸೈನ್ಗೆ ನಿರ್ಮಾಪಕ ಉದಯ್ ಅವರ ಬೆಂಬಲ ಸಾಕಷ್ಟಿದೆ. ಇಟಲಿ, ಪ್ಯಾರಿಸ್ಗೆ ಹೋಗಿ ಕಾಸ್ಟೂಮ್ ತಂದರೂ ಪರವಾಗಿಲ್ಲ ಅಂತಾ ತಿಳಿಸಿದ್ರು. ನಾವು ಮುಂಬೈ, ಬ್ಯಾಂಕಾಕ್, ಟರ್ಕಿಯಿಂದ ಕೆಲ ಮಟಿರಿಯಲ್ಗಳನ್ನು ಇಂಪೋರ್ಟ್ ಮಾಡಿಕೊಂಡ್ವಿ. ಚೈನಾದಿಂದಲೂ ಕಾಸ್ಟೂಮ್ ತರಿಸಿಕೊಂಡಿದ್ದೇವೆಂದು ತಿಳಿಸಿದರು.
ಮಾತು ಮುಂದುವರಿಸಿದ ವಿನೋದ್, ಸಿನಿಮಾಗಾಗಿ 200 ದಿನಗಳ ಕಾಲ ಕೆಲಸ ಮಾಡಿದ್ದೇವೆ. ಹೈದರಾಬಾದ್ನಲ್ಲಿ ಫಸ್ಟ್ ಶೆಡ್ಯೂಲ್ ಮಾಡಿದಾಗ ಧ್ರುವ ಸರ್ ಸಖತ್ ಖುಷಿ ಪಟ್ಟು, ನೀನು ಹಾಕಿರೋ ಟ್ಯಾಟೂ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀರೋಯಿನ್ ಅನ್ವೇಶಿ ಜೈನ್ ಹಾಗೂ ಹಾಲಿವುಡ್ ನಟರಿಗೂ ಟ್ಯಾಟೂ ಹಾಕಿದ್ದೇನೆಂದು ತಿಳಿಸಿದರು.
ನಂತರ ಚೇತನ್ ಮಾತನಾಡಿ, ಧ್ರುವ ಸರ್ ಸಹ ಸಖತ್ ಸಪೋರ್ಟ್ ಮಾಡಿದ್ದಾರೆ. ನನ್ನ ಬಾಡಿ ಮ್ಯಾನರಿಸಂಗೆ ತಕ್ಕಂತೆ ಕಾಸ್ಟೂಮ್ ಮಾಡಿ ಅಂತಾ ತಿಳಿಸಿದ್ರು. ಟೈಟಲ್ ಸಾಂಗ್ನಲ್ಲಿ ಒಬ್ಬ ನಟನಿಗೆ ಇಷ್ಟೊಂದು ಕಾಸ್ಟೂಮ್ ಹಾಕಿಸಿರೋದು ಭಾರತೀಯ ಚಿತ್ರರಂಗದಲ್ಲಿ ಬಹುಶಃ ಇದೇ ಮೊದಲು. ಇದಕ್ಕೆ ಅರ್ಜುನ್ ಸರ್, ಧ್ರುವ ಸರ್, ನಿರ್ಮಾಪಕರೇ ಕಾರಣ. ಇನ್ನು ಈ ಸಿನಿಮಾ ಶುರುವಾದಾಗಿನಿಂದ ಹಿಡಿದು ಚಿತ್ರ ಮುಗಿಯೋವರೆಗೂ ವೆರೈಟಿ ಆಫ್ ಕಾಸ್ಟೂಮ್ಗಳನ್ನು ಮಾಡಿದ್ವಿ. ನನಗಿದು ಲೈಫ್ ಟೈಮ್ ಅಚೀವ್ಮೆಂಟ್ ಎಂದು ತಿಳಿಸಿದರು.
ವಿನೋದ್ ಮಾತನಾಡಿ, ಮಾರ್ಟಿನ್ ಸಿನಿಮಾದ ಟ್ಯಾಟೂ ಸಖತ್ ವೈರಲ್ ಆಗಿದೆ. ಇದಾದ ಮೇಲೆ ನನಗೂ ಬೇರೆ ಬೇರೆ ಸಿನಿಮಾಗಳಿಂದ ಸಾಕಷ್ಟು ಆಫರ್ಗಳು ಬರುತ್ತಿವೆ ಎಂದರು.
ಇದನ್ನೂ ಓದಿ: ಮಾರ್ಟಿನ್ ಅದ್ದೂರಿ ಮೇಕಿಂಗ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರಕ್ಕೆ ಕೌಂಟ್ಡೌನ್!
ಪಕ್ಕಾ ಮಾಸ್ ಸಿನಿಮಾವಾಗಿರೋ ಮಾರ್ಟಿನ್ ಬಿಡುಗಡೆಗೆ ಇನ್ನೊಂದು ದಿನ ಬಾಕಿ. ದೇಶ ಪ್ರೇಮ, ಮುದ್ದಾದ ಲವ್ ಸ್ಟೋರಿ ಹಾಗೂ ಕೌಟುಂಬಿಕ ಕಥೆಯನ್ನೊಳಗೊಂಡಿರುವ ಚಿತ್ರದ ಮೇಲೆ ಸಾಕಷ್ಟು ಕುತೂಹಲವಿದೆ. ಧ್ರುವಗೆ ಜೋಡಿಯಾಗಿ ವೈಭವಿ ಶಾಂಡಿಲ್ಯಾ ನಟಿಸಿದ್ದು, ಅನ್ವೇಶಿ ಜೈನ್, ನಿಕಿತಿನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಬೆಂಗಳೂರು ಹಾಗೂ ಕಾಶ್ಮೀರದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿವೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: 'ಪ್ರೇಕ್ಷಕರಾಗಿ ನಾವು ನಕಾರಾತ್ಮಕವಾಗಿದ್ದೇವೆ': ಸೂಪರ್ ಸ್ಟಾರ್ ಜೂ.ಎನ್ಟಿಆರ್ ಹೀಗಂದಿದ್ದೇಕೆ?
ಕನ್ನಡದಲ್ಲಿ ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಕೃಷ್ಣ ರುಕ್ಕು, ಬ್ರಹ್ಮಚಾರಿ ಅಂತಹ ಸಿನಿಮಾಗಳನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ ಮೊದಲ ಬಾರಿಗೆ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈಜೋಡಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 3,000 ಚಿತ್ರಮಂದಿರಗಳಲ್ಲಿ ಅಕ್ಟೋಬರ್ 11ರಂದು ಮಾರ್ಟಿನ್ ಬಿಡುಗಡೆ ಆಗಲಿದೆ.