ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರ ಮೈಸೂರಿನ ವುಡ್ಲ್ಯಾಂಡ್ಸ್ ಥಿಯೇಟರ್ನಲ್ಲಿ 50 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಮಾರಂಭ ಆಯೋಜಿಸಿ, ಚಿತ್ರದ ಗೆಲುವಿಗೆ ಕಾರಣರಾದ ಚಿತ್ರತಂಡದವರನ್ನು ನಿರ್ಮಾಪಕರು ಸ್ಮರಣಿಕೆ ನೀಡಿ ಗೌರವಿಸಿತು.
ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, "ಚಿತ್ರಮಂದಿರಗಳು ದೇವಸ್ಥಾನ ಇದ್ದಂತೆ. ಅಲ್ಲಿಗೆ ಬರುವ ಪ್ರೇಕ್ಷಕರು ದೇವರುಗಳು. ಒಂದು ಸಿನಿಮಾ ಪ್ರೇಕ್ಷಕರ ಮನ ಗೆದ್ದರೆ, ನಾವು ಗೆದ್ದಂತೆ. ಐದು ದಿನ, ಏಳು ದಿನ ಅಂತ ಲೆಕ್ಕ ಹಾಕುತ್ತಿರುವ ಈ ಸಂದರ್ಭದಲ್ಲಿ ಚಿತ್ರವೊಂದು 50 ದಿನ ಪೂರೈಸಿರುವುದು ಸುಲಭದ ಮಾತಲ್ಲ. ಈ ಗೆಲುವನ್ನು ನಾನು ಕನ್ನಡ ಕಲಾಭಿಮಾನಿಗಳಿಗೆ ಅರ್ಪಿಸುತ್ತೇನೆ. ನಿರ್ದೇಶಕರಿಗೆ, ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಚಿತ್ರದ ಮೊದಲ ಹಾಡು ಮೈಸೂರಿನಲ್ಲೇ ಬಿಡುಗಡೆಯಾಗಿತ್ತು. 50 ದಿನದ ಸಮಾರಂಭವನ್ನು ಮೈಸೂರಿನಲ್ಲೇ ಮಾಡೋಣ ಅಂತ ಆಗ ನಾನು ಹೇಳಿದ್ದೆ. ಆ ಮಾತು ನಿಜವಾಗಿರುವುದಕ್ಕೆ ಖುಷಿಯಾಗಿದೆ" ಎಂದರು.
ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, "ಸಿಂಗಲ್ ಥಿಯೇಟರ್ಗೆ ಜನರು ಬರುತ್ತಿಲ್ಲ ಎಂಬ ಸಂದರ್ಭದಲ್ಲಿ ನಮ್ಮ ಕೃಷ್ಣಂ ಪ್ರಣಯ ಸಖಿ ಚಿತ್ರ ಸಿಂಗಲ್ ಥಿಯೇಟರ್ನಲ್ಲೇ 50 ದಿನ ಪೂರೈಸಿರುವುದು ಖುಷಿಯಾಗಿದೆ. ಹಾಗಾಗಿ ಸಮಾರಂಭವನ್ನು ಇಲ್ಲೇ ಆಯೋಜಿಸಿದ್ದೇವೆ. ಇನ್ನು ಈ ಚಿತ್ರ ಐವತ್ತು ದಿನ ಯಶಸ್ವಿಯಾಗಿ ಪೂರೈಸಲು ನಿರ್ಮಾಪಕ ಪ್ರಶಾಂತ್ ಜಿ.ರುದ್ರಪ್ಪ, ನಾಯಕ ನಟ ಗಣೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಛಾಯಾಗ್ರಾಹಕ ವೆಂಕಟ್ ರಾಮಪ್ರಸಾದ್ ಪ್ರಮುಖ ಕಾರಣ. ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದು ಹೇಳಿದರು.
ನಂತರ ನಿರ್ಮಾಪಕ ಪ್ರಶಾಂತ್ ಜಿ.ರುದ್ರಪ್ಪ ಮಾತನಾಡಿ, "ಒಬ್ಬ ನಿರ್ಮಾಪಕನಿಗೆ ತನ್ನ ಚಿತ್ರ 50 ದಿನಗಳನ್ನು ಪೂರೈಸಿದೆ ಎಂಬ ಖುಷಿಗಿಂತ ಮತ್ತೇನು ಬೇಕು?. ಈ ಸಂದರ್ಭದಲ್ಲಿ ನನ್ನ ಇಡೀ ತಂಡಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಹಿರಿಯ ನಟ ಶಶಿಕುಮಾರ್, ಗಿರಿ ಶಿವಣ್ಣ, ನಟಿ ಶರಣ್ಯ ಶೆಟ್ಟಿ, ಡಾ.ವಿ.ನಾಗೇಂದ್ರ ಪ್ರಸಾದ್, ಡಿಫರೆಂಟ್ ಡ್ಯಾನಿ, ಕಾರ್ಯಕಾರಿ ನಿರ್ಮಾಪಕ ಶರತ್ ಭೋಜರಾಜ್ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಇದನ್ನೂ ಓದಿ: ಹೊಸಬರ ಮರ್ಡರ್ ಮಿಸ್ಟರಿ 'ಆಪರೇಷನ್ ಡಿ' ಸಿನಿಮಾಗೆ ಸಿಕ್ತು ಆ್ಯಕ್ಷನ್ ಪ್ರಿನ್ಸ್ ಬಲ - Operation D Teaser