ಚೆನ್ನೈ(ತಮಿಳುನಾಡು): ಪ್ರಸಿದ್ಧ G.O.A.T ಚಿತ್ರದ ಸಂಗೀತ ಸಂಯೋಜಕ ಯುವನ್ ಶಂಕರ್ ರಾಜಾ ಅವರು ಬಾಡಿಗೆ ಮನೆ ಮಾಲೀಕನ ವಿರುದ್ಧ ಭಾರಿ ಪ್ರಮಾಣದ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಏಪ್ರಿಲ್ 2021 ರಿಂದ ಚೆನ್ನೈನ ನುಂಗಂಬಾಕ್ಕಂ ಲೇಕ್ ಏರಿಯಾದಲ್ಲಿರುವ ಮನೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದಾರೆ. ಈ ಮನೆಯನ್ನೇ ಅವರು ಸ್ಟುಡಿಯೋವಾಗಿ ಬಳಸುತ್ತಿದ್ದಾರೆ. ಈ ಕುರಿತು ಮಾಡಿಕೊಂಡಿರುವ ಒಪ್ಪಂದದಂತೆ ಅವರು ಮಾಸಿಕ ಬಾಡಿಗೆ 1 ಲಕ್ಷದ 25 ಸಾವಿರ ರೂಪಾಯಿ ಕಟ್ಟುತ್ತಿದ್ದಾರೆ ಮತ್ತು ಠೇವಣಿಯಾಗಿ 12 ಲಕ್ಷ ರೂ. ಪಾವತಿಸಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ 2023ರ ಫೆಬ್ರವರಿಯಿಂದ ಮನೆಯ ಮಾಸಿಕ ಬಾಡಿಗೆಯನ್ನು ಒಂದು ಲಕ್ಷದ 50 ಸಾವಿರ ರೂಪಾಯಿಗೆ ಮಾಲೀಕರು ಹೆಚ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಸಂಗೀತ ಸಂಯೋಜಕ ಯುವನ್ ಶಂಕರ್ ರಾಜಾ ಅವರಿಗೆ 18 ಲಕ್ಷ ಬಾಡಿಗೆ ನೀಡಿಲ್ಲ ಎಂದು ಲೀಗಲ್ ನೋಟಿಸ್ ಕಳುಹಿಸಿದ್ದರು.
ಇದಾದ ನಂತರ ಯುವನ್ ಶಂಕರ್ ರಾಜಾ ಅವರು ಒಟ್ಟು 18 ಲಕ್ಷ ರೂ. ಬಾಡಿಗೆಯಲ್ಲಿ ಕೇವಲ 12 ಲಕ್ಷ ರೂ.ಗಳನ್ನು ಮನೆ ಮಾಲೀಕರಿಗೆ ಚೆಕ್ ರೂಪದಲ್ಲಿ ನೀಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದ ನವೆಂಬರ್‌ನಿಂದ ಇಲ್ಲಿಯವರೆಗೆ ಉಳಿದ ಆರು ಲಕ್ಷ ಮತ್ತು 20 ಲಕ್ಷಕ್ಕೂ ಹೆಚ್ಚು ಹಣವನ್ನು ಯುವನ್ ಶಂಕರ್ ರಾಜ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.
ಈ ವೇಳೆ ಮನೆ ಬಾಡಿಗೆ ಪಾವತಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ನೀಡದ ಕಾರಣ ಯುವನ್ ಶಂಕರ್ ರಾಜಾ ವಿರುದ್ಧ ಟ್ರಿಪ್ಲಿಕೇನ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನೆ ಮಾಲೀಕರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯುವನ್ ಶಂಕರ್ ರಾಜಾ ಪರ ವಕೀಲರಿಂದ ನೋಟಿಸ್: ಈ ಸಂಬಂಧ ಯುವನ್ ಶಂಕರ್ ರಾಜಾ ತಮ್ಮ ವಕೀಲರ ಮೂಲಕ ಬಾಡಿಗೆ ಮನೆಯ ಮಾಲೀಕರಿಗೆ ನೋಟಿಸ್ ಕಳುಹಿಸಿದ್ದಾರೆ. ಇದರಲ್ಲಿ ''ಮನೆಯ ಮಾಲೀಕರು ನಿರಂತರವಾಗಿ ನನ್ನ ಮೇಲೆ ಮಾನಹಾನಿ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ರೂ. 5 ಕೋಟಿ ಪರಿಹಾರ ನೀಡಬೇಕು. ಇದು ಸಿವಿಲ್ ವಿಷಯವಾಗಿರುವುದರಿಂದ ಕ್ರಿಮಿನಲ್ ಮೊಕದ್ದಮೆಯಾಗಿ ಪರಿಗಣಿಸಲಾಗುವುದು. ಅಲ್ಲದೆ, ನನ್ನ ವಿರುದ್ಧ ಮಾನಹಾನಿಕರ ಕಾಮೆಂಟ್‌ಗಳನ್ನು ಹರಡುವವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರು ನನಗೆ ತೀವ್ರ ಮಾನಸಿಕ ತೊಂದರೆ ನೀಡಿದ್ದಾರೆ'' ಎಂದು ಅವರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಎರಡೂ ಕಡೆಯಿಂದ ಬಂದಿರುವ ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ಟಗರು ಪಲ್ಯ ನಟಿ ಅಮೃತಾ ಪ್ರೇಮ್ - Amrutha Prem Next movie